ನವದೆಹಲಿ: ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂದು ಹೇಳಿಕೆ ನೀಡಿದ್ದ ತಮಿಳುನಾಡಿನ ಸಚಿವ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ತಮ್ಮ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡಿರುವ ಉದಯನಿಧಿ ಅವರು, ಈಗ ಅರ್ಜಿ ಹಿಡಿದುಕೊಂಡು ನ್ಯಾಯಾಲಯಕ್ಕೆ ಬಂದಿರುವುದು ಏಕೆ? ಎಂದು ನ್ಯಾಯಾಲಯ ಪ್ರಶ್ನಿಸಿದೆ.
ತಮ್ಮ ಹೇಳಿಕೆ ಕುರಿತಂತೆ ಕರ್ನಾಟಕ, ಉತ್ತರ ಪ್ರದೇಶ, ಬಿಹಾರ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ ರಾಜ್ಯಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ಒಗ್ಗೂಡಿಸಬೇಕೆಂದು ಸ್ಟಾಲಿನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ನೇತೃತ್ವದ ಪೀಠವು, ಮನವಿ ಪುರಸ್ಕರಿಸಲು ನಿರಾಕರಿಸಿದೆ.
‘ಸ್ಟಾಲಿನ್ ಒಬ್ಬ ಮಂತ್ರಿ, ಸಾಮಾನ್ಯ ವ್ಯಕ್ತಿಯಲ್ಲ. ತಮ್ಮ ಹೇಳಿಕೆಯ ಪರಿಣಾಮ ಏನು ಎಂಬುದರ ಅರಿವು ಅವರಿಗೆ ಆಗಬೇಕು’ ಎಂದು ಸ್ಟಾಲಿನ್ ಪರ ಹಾಜರಿದ್ದ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರಿಗೆ ನ್ಯಾಯಪೀಠ ಹೇಳಿದೆ.
‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀವು ದುರ್ಬಳಕೆ ಮಾಡಿಕೊಳ್ಳುತ್ತೀರಿ, ಧಾರ್ಮಿಕ ಆಚರಣೆಯ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಳ್ಳುತ್ತೀರಿ. ಈಗ ನೀವು ಸುಪ್ರೀಂ ಕೋರ್ಟ್‌ನಲ್ಲಿ ನೇರವಾಗಿ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯವನ್ನು ಬಳಸುತ್ತಿದ್ದೀರಿ. ನಿಮ್ಮ ಹೇಳಿಕೆಯ ಪರಿಣಾಮಗಳ ಬಗ್ಗೆ ನಿಮಗೆ ಗೊತ್ತಿಲ್ಲವೇ? ನೀವು ಸಾಮಾನ್ಯ ವ್ಯಕ್ತಿ ಅಲ್ಲ. ನೀವೊಬ್ಬ ಸಚಿವ. ಪರಿಣಾಮಗಳ ಬಗ್ಗೆ ನಿಮಗೆ ಗೊತ್ತಿರಬೇಕು’ ಎಂದು ಪೀಠವು ಹೇಳಿತು. ಅರ್ಜಿಯ ವಿಚಾರಣೆಯನ್ನು ಮಾರ್ಚ್ 15ಕ್ಕೆ ಮುಂದೂಡಲಾಗಿದೆ.
2023ರ ಸೆಪ್ಟೆಂಬರ್‌ನಲ್ಲಿ ಸಮ್ಮೇಳನವೊಂದರಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವು ಸಾಮಾಜಿಕ ನ್ಯಾಯ, ಸಮಾನತೆಗೆ ವಿರುದ್ಧವಾಗಿದೆ. ಹಾಗಾಗಿ, ಅದನ್ನು ನಿರ್ಮೂಲನೆ ಮಾಡಬೇಕೆಂದು ಹೇಳಿದ್ದರು.
ಉದಯನಿಧಿ ಅವರ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ, ಅವರ ವಿರುದ್ಧ ಆರು ರಾಜ್ಯಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ಒಗ್ಗೂಡಿಸಬೇಕು ಎಂದು ಅವರ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಹೇಳಿದರು.
ಪತ್ರಕರ್ತ ಅರ್ನಾಬ್ ಗೋಸ್ವಾಮಿ, ಬಿಜೆಪಿಯ ನೂಪುರ್ ಶರ್ಮ ಮತ್ತು ಇತರ ಕೆಲವರ ಪ್ರಕರಣಗಳಲ್ಲಿ ಎಫ್‌ಐಆರ್‌ಗಳನ್ನು ಒಂದೇ ಕಡೆ ತರುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು ಎಂದು ಸಿಂಘ್ವಿ ಅವರು ಪೀಠಕ್ಕೆ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.