ADVERTISEMENT

ಸಲಿಂಗ ವಿವಾಹ: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳ ಪರಿಶೀಲನೆ ಇಂದು

ಬಹಿರಂಗ ವಿಚಾರಣೆಗೆ ನಕಾರ

ಪಿಟಿಐ
Published 9 ಜುಲೈ 2024, 23:30 IST
Last Updated 9 ಜುಲೈ 2024, 23:30 IST
<div class="paragraphs"><p>ಸ</p></div>

   

ನವದೆಹಲಿ: ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಲು ನಿರಾಕರಿಸಿ ನೀಡಿದ್ದ ತೀರ್ಪಿನ ಮರುಪರಿಶೀಲನೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಬಹಿರಂಗ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಮಂಗಳವಾರ ಅಸಮ್ಮತಿ ಸೂಚಿಸಿದೆ. 

ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಲು ನಿರಾಕರಿಸಿ ಸುಪ್ರೀಂ ಕೋರ್ಟ್‌ ಕಳೆದ ವರ್ಷ ಅಕ್ಟೋಬರ್ 17ರಂದು ತೀರ್ಪು ನೀಡಿತ್ತು. ಆ ತೀರ್ಪಿನ ಮರುಪರಿಶೀಲನೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಬುಧವಾರ (ಜುಲೈ 10) ಪರಿಶೀಲಿಸಲಿದೆ.

ADVERTISEMENT

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ, ಹಿಮಾ ಕೊಹ್ಲಿ, ಬಿ.ವಿ.ನಾಗರತ್ನಾ ಹಾಗೂ ಪಿ.ಎಸ್‌.ನರಸಿಂಹ ಅವರನ್ನೊಳಗೊಂಡ ಐವರು ಸದಸ್ಯರ ಪೀಠವು ಅರ್ಜಿಗಳನ್ನು ಪರಿಶೀಲಿಸಲಿದೆ.

ಹಿರಿಯ ವಕೀಲರಾದ ಅಭಿಷೇಕ್‌ ಸಿಂಘ್ವಿ ಮತ್ತು ಎನ್‌.ಕೆ.ಕೌಲ್‌ ಅವರು ಮಂಗಳವಾರ ‘ಈ ಅರ್ಜಿಗಳ ವಿಚಾರಣೆಯನ್ನು ಬಹಿರಂಗವಾಗಿ ನಡೆಸಬಹುದು ಎಂದು ನಾವು ಹೇಳುತ್ತೇವೆ’ ಎಂಬುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. 

‘ಸಂವಿಧಾನ ಪೀಠವು ಪರಿಶೀಲಿಸುವಂತಹ ಅರ್ಜಿಗಳು ಇದಾಗಿರುವ ಕಾರಣ ಕೊಠಡಿಯಲ್ಲೇ ಪರಿಶೀಲನೆ ನಡೆಯಲಿದೆ’ ಎಂದು ಸಿಜೆಐ ತಿಳಿಸಿದರು. 

ಸುಪ್ರೀಂ ಕೋರ್ಟ್‌ನ ನಿಯಮಗಳ ಪ್ರಕಾರ, ತೀರ್ಪಿನ ಪುನರ್ ಪರಿಶೀಲನಾ ಅರ್ಜಿಯನ್ನು ಸಂಬಂಧಪಟ್ಟ ನ್ಯಾಯಮೂರ್ತಿಗಳು ತಮ್ಮ ಕೊಠಡಿಯಲ್ಲಿಯೇ ಪರಿಶೀಲಿಸುತ್ತಾರೆ.

ಸುಪ್ರೀಂ ಕೋರ್ಟ್‌ ಸಂವಿಧಾನ ಪೀಠವು ಕಳೆದ ವರ್ಷ ನೀಡಿದ್ದ ತೀರ್ಪಿನಲ್ಲಿ ಸಲಿಂಗ ಜೋಡಿಗಳ ಸಹಬಾಳ್ವೆಯ ಹಕ್ಕನ್ನು ಎತ್ತಿಹಿಡಿದಿತ್ತಾದರೂ, ಅವರ ಮದುವೆಗೆ ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ಕಾನೂನಿನ ಮಾನ್ಯತೆ ನೀಡಲು ನಿರಾಕರಿಸಿತ್ತು.

‘ಸಲಿಂಗ ಜೋಡಿಗಳಿಗೆ ಮದುವೆಯಾಗುವ ಹಕ್ಕನ್ನು ನ್ಯಾಯಾಂಗ ಗುರುತಿಸುವುದಿಲ್ಲ ಮತ್ತು ಈ ವಿಷಯದ ಬಗ್ಗೆ ಕಾನೂನು ರೂಪಿಸುವುದು ಸಂಸತ್‌ಗೆ ಬಿಟ್ಟದ್ದು’ ಎಂದು ತೀರ್ಪು ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.