ADVERTISEMENT

ಅಂತಿಮ ವರ್ಷದ ವೈದ್ಯಕೀಯ ಪಿ.ಜಿ ಪರೀಕ್ಷೆ ರದ್ಧತಿಗೆ ಸುಪ್ರೀಂ ನಕಾರ

ಪಿಟಿಐ
Published 18 ಜೂನ್ 2021, 12:26 IST
Last Updated 18 ಜೂನ್ 2021, 12:26 IST
ಕೋರ್ಟ್‌–ಪ್ರಾತಿನಿಧಿಕ ಚಿತ್ರ
ಕೋರ್ಟ್‌–ಪ್ರಾತಿನಿಧಿಕ ಚಿತ್ರ   

ನವದೆಹಲಿ: ಪರೀಕ್ಷೆಗಳನ್ನು ಬರೆಯಬೇಕಾದ ವೈದ್ಯರು ‘ಕೋವಿಡ್‌–19' ಕರ್ತವ್ಯದಲ್ಲಿ ನಿರತರಾಗಿದ್ದಾರೆ ಎಂಬುದನ್ನು ಆಧಾರವಾಗಿಟ್ಟುಕೊಂಡು ಅಂತಿಮ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ತರಗತಿಗಳ ಪರೀಕ್ಷೆ ಮುಂದೂಡುವಂತೆ ಅಥವಾ ರದ್ದುಗೊಳಿಸುವಂತೆ ವೈದ್ಯಕೀಯ ವಿಶ್ವವಿದ್ಯಾಲಯಗಳಿಗೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಎಂ.ಆರ್‌.ಷಾ ಅವರನ್ನೊಳಗೊಂಡ ರಜಾಕಾಲದ ಪೀಠ, ‘ಈ ವಿಚಾರಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ವಿಶ್ವವಿದ್ಯಾಲಯಗಳಿಗೆ ಯಾವುದೇ ಸಾಮಾನ್ಯ ಆದೇಶವನ್ನು ರವಾನಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

‘ದೇಶದಲ್ಲಿನ ಕೋವಿಡ್‌ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಅಂತಿಮ ವರ್ಷದ ಪರೀಕ್ಷೆಯ ದಿನಾಂಕಗಳನ್ನು ನಿಗದಿಪಡಿಸುವಂತೆ, ರಾಷ್ಟ್ರೀಯ ವೈದ್ಯಕೀಯ ಮಂಡಳಿ(ಎನ್‌ಎಂಸಿ) ಏಪ್ರಿಲ್‌ನಲ್ಲೇ ಸಲಹೆ ನೀಡಿತ್ತು ಎಂದು ನ್ಯಾಯಾಲಯ ನೆನಪು ಮಾಡಿದೆ.

ADVERTISEMENT

‘ನವದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್‌) ಆಯೋಜಿಸಿದ್ದ ಐಎನ್‌ಐ ಸಿಇಟಿ ಪರೀಕ್ಷೆಗಳನ್ನು ಒಂದು ತಿಂಗಳು ಮುಂದೂಡುವಂತಹ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಿತ್ತು. ಏಕೆಂದರೆ, ಅಲ್ಲಿ, ವಿದ್ಯಾರ್ಥಿಗಳು ಸಿದ್ಧವಾಗಲು ಸೂಕ್ತ ಸಮಯ ನೀಡದೆ ಪರೀಕ್ಷೆಯ ದಿನಾಂಕ ನಿಗದಿಪಡಿಸಲಾಗಿತ್ತು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಪರೀಕ್ಷೆ ಮುಂದೂಡಲಾಗಿತ್ತು‘ ಎಂದು ನ್ಯಾಯಪೀಠ ಹೇಳಿದೆ.

ಪರೀಕ್ಷೆಗಾಗಿ ತಯಾರಿ ನಡೆಸಲು ವಿದ್ಯಾರ್ಥಿಗಳಿಗೆ ಸೂಕ್ತ ಸಮಯ ನೀಡುವಂತೆ ಎಲ್ಲಾ ವಿಶ್ವವಿದ್ಯಾಲಯಗಳಿಗೆ ನಿರ್ದೇಶನ ನೀಡಲು ಎನ್‌ಎಂಸಿಗೆ ನಿರ್ದೇಶನ ನೀಡುವಂತೆ ಕೋರಿ 29 ವೈದ್ಯರ ಪರವಾಗಿ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಪೀಠ ತಿರಸ್ಕರಿಸಿತು.

‘ಪರೀಕ್ಷೆಗೆ ಸಿದ್ಧತೆ ನಡೆಸಲು ಸೂಕ್ತ ಸಮಯ ಯಾವುದು ಎಂದು ನಮಗೆ ತಿಳಿದಿಲ್ಲ. ಆ ಸಮಯವನ್ನು ನ್ಯಾಯಾಲಯ ಹೇಗೆ ನಿರ್ಧರಿಸಬಹುದು? ಪ್ರತಿಯೊಬ್ಬರಿಗೂ ಅವರದ್ದೇ ಆದ ಸಮಯವಿರುತ್ತದೆ. ಹಾಗಾಗಿ, ಈ ವಿಚಾರಕ್ಕೆ ಸಂಬಂಧಸಿದಂತೆ ಆಯಾ ಪ್ರದೇಶದಲ್ಲಿರುವ ಕೊರೊನಾ ಸಾಂಕ್ರಾಮಿಕದ ಪರಿಸ್ಥಿತಿಯನ್ನು ಆಧರಿಸಿ, ಎನ್‌ಎಂಸಿ ಸಲಹೆಯ ಮೇರೆಗೆ ವಿಶ್ವವಿದ್ಯಾಲಯಗಳು ತೀರ್ಮಾನ ಕೈಗೊಳ್ಳಲಿ‘ ಎಂದು ನ್ಯಾಯಪೀಠ ಹೇಳಿದೆ.

‘ಭಾರತದಂತಹ ವಿಶಾಲವಾದ ರಾಷ್ಟ್ರದಲ್ಲಿ ಸಾಂಕ್ರಾಮಿಕ ರೋಗದ ಪರಿಸ್ಥಿತಿ ಎಲ್ಲ ಕಡೆ ಒಂದೇ ರೀತಿ ಇರುವುದಿಲ್ಲ. ದೆಹಲಿಯಲ್ಲಿ ಏಪ್ರಿಲ್– ಮೇ ತಿಂಗಳಲ್ಲಿ ಪರಿಸ್ಥಿತಿ ಕೆಟ್ಟದಾಗಿತ್ತು. ಈಗ ಒಂದು ದಿನಕ್ಕೆ 200 ಸೋಂಕಿನ ಪ್ರಕರಣಗಳು ದಾಖಲಾಗುತ್ತಿವೆ. ಅದೇ ರೀತಿ ಕರ್ನಾಟಕದಲ್ಲಿ ಈಗಲೂ ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲ. ಹಾಗಾಗಿ, ನ್ಯಾಯಾಲಯ ಎಲ್ಲ ವಿಶ್ವವಿದ್ಯಾಲಯಗಳ ಅಭಿಪ್ರಾಯ ಪಡೆಯದೇ, ಆದೇಶ ಹೊರಡಿಸಲು ಸಾಧ್ಯವಿಲ್ಲ‘ ಎಂದು ನ್ಯಾಯಪೀಠ ತಿಳಿಸಿದೆ.

ಎನ್‌ಎಂಸಿ ಪರವಾಗಿ ಹಾಜರಾಗಿದ್ದ ವಕೀಲ ಗೌರವ ಶರ್ಮಾ, ‘ಎಲ್ಲ ವೈದ್ಯರು ಕೋವಿಡ್‌ ಕರ್ತವ್ಯಕ್ಕೆ ನಿಯೋಜನೆಗೊಂಡಿಲ್ಲ. ಪರೀಕ್ಷೆ ದಿನಾಂಕ ನಿಗದಿಪಡಿಸುವ ಮುನ್ನ ಪ್ರಾದೇಶಿಕವಾಗಿ ಕೋವಿಡ್‌ ಪರಿಸ್ಥಿತಿಯನ್ನು ಗಮನಿಸುವಂತೆ ಎನ್‌ಎಂಸಿ ಎಲ್ಲ ವಿಶ್ವವಿದ್ಯಾಲಯಗಳಿಗೂ ಏಪ್ರಿಲ್ ತಿಂಗಳಲ್ಲೇ ಸಲಹೆಯನ್ನು ನೀಡಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.