ನವದೆಹಲಿ: ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ವ್ಯಾಪ್ತಿಯಿಂದ ಧಾರ್ಮಿಕ ಶಿಕ್ಷಣ ಸಂಸ್ಥೆಗಳನ್ನು ಹೊರಗಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿತು.
ಪಿಐಎಲ್ ಹಿಂಪಡೆಯುವಂತೆ ಅರ್ಜಿದಾರಗೆ ಸೂಚಿಸಿದ ನ್ಯಾಯಮೂರ್ತಿ ಎಲ್.ನಾಗೇಶ್ವರರಾವ್ ನೇತೃತ್ವದ ನ್ಯಾಯಪೀಠ, ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಅನುಮತಿ ನೀಡಿತು.
ಬಿಜೆಪಿ ನಾಯಕ ಹಾಗೂ ವಕೀಲ ಅಶ್ವಿನಿಕುಮಾರ್ ಉಪಾಧ್ಯಾಯ ಅವರು ಪಿಐಎಲ್ ಸಲ್ಲಿಸಿದ್ದರು.
‘8 ರಿಂದ 16ನೇ ವಯಸ್ಸಿನ ಅವಧಿ ಮಹತ್ವದ್ದು. ಹೀಗಾಗಿ ರಾಷ್ಟ್ರೀಯ ಪಠ್ಯಕ್ರಮ ಜಾರಿಗೊಳಿಸುವುದು ಅಗತ್ಯ. ಆದರೆ, ಮದಸರಾ, ವೇದ ಪಾಠಶಾಲೆಗಳಂತಹ ಸಂಸ್ಥೆಗಳನ್ನು ಆರ್‌ಟಿಇ ಕಾಯ್ದೆ ವ್ಯಾಪ್ತಿಯಿಂದ ಹೊರಗಡೆ ಇಟ್ಟಿರುವುದು ಮಕ್ಕಳ ಮೇಲೆ ಧಾರ್ಮಿಕತೆ ಪ್ರಭಾವ ಬೀರುವುದಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ’ ಎಂದು ಅರ್ಜಿದಾರ ಪರ ವಕೀಲ ರಂಜಿತ್ ಕುಮಾರ್ ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.