ನವದೆಹಲಿ : ಲೆಫ್ಟಿನೆಂಟ್ ಗವರ್ನರ್ ಅವರಿಗೆ ದೆಹಲಿಯ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣದ ಅಧಿಕಾರ ನೀಡುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್, ಸೋಮವಾರ ನಿರಾಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಹಾಗೂ ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ನ್ಯಾಯಪೀಠವು, ‘ತಿದ್ದುಪಡಿ ಕಾನೂನು ಪ್ರಶ್ನಿಸಿ ಈಗಾಗಲೇ ದೆಹಲಿ ಸರ್ಕಾರವು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ಹಾಗಾಗಿ, ಹೊಸದಾಗಿ ಅರ್ಜಿ ಸ್ವೀಕರಿಸುವುದಿಲ್ಲ’ ಎಂದು ಹೇಳಿತು.
ಈ ಆದೇಶವು ವಿಚಾರಣೆಗೆ ಬಾಕಿ ಇರುವ ದೆಹಲಿ ಸರ್ಕಾರದ ಅರ್ಜಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದೂ ಸ್ಪಷ್ಟಪಡಿಸಿತು.
ವಕೀಲ ಮುಕೇಶ್ ಕುಮಾರ್ ಎಂಬುವರು ಸ್ವಯಂಪ್ರೇರಿತವಾಗಿ ಈ ಅರ್ಜಿ ಸಲ್ಲಿಸಿದ್ದರು.
ಆಗಸ್ಟ್ 25ರಂದು ಸುಪ್ರೀಂ ಕೋರ್ಟ್‌ನ ಅನುಮತಿ ಮೇರೆಗೆ ದೆಹಲಿ ಸರ್ಕಾರವು ತಿದ್ದುಪಡಿ ಅರ್ಜಿ ಸಲ್ಲಿಸಿದೆ.
ದೆಹಲಿಯ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣ ಕುರಿತು ಕೇಂದ್ರ ಸರ್ಕಾರವು ಮೇ 19ರಂದು ಸುಗ್ರೀವಾಜ್ಞೆ ಹೊರಡಿಸಿತ್ತು. ಬಳಿಕ ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ರಾಷ್ಟ್ರ ರಾಜಧಾನಿ ಪ್ರದೇಶ ದೆಹಲಿ ಸರ್ಕಾರದ (ತಿದ್ದುಪಡಿ) ಮಸೂದೆಯನ್ನು ಉಭಯ ಸದನಗಳಲ್ಲಿ ಮಂಡಿಸಿ ಅಂಗೀಕಾರ ಪಡೆದಿದೆ. ಇದಕ್ಕೆ ರಾಷ್ಟ್ರಪತಿ ಅವರು ಅಂಕಿತ ಹಾಕಿದ್ದು, ಕಾನೂನು ಸ್ವರೂಪ ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.