ADVERTISEMENT

ಧಾರ್ಮಿಕ ಸ್ಥಳಗಳ ನಿರ್ವಹಣೆ: ಹಿಂದೂಗಳಿಗೆ ಅನುಮತಿ ಕೋರಿದ್ದ ಪಿಐಎಲ್‌ ವಜಾ

ಪಿಟಿಐ
Published 18 ಅಕ್ಟೋಬರ್ 2023, 13:52 IST
Last Updated 18 ಅಕ್ಟೋಬರ್ 2023, 13:52 IST
–
   

ನವದೆಹಲಿ: ಮುಸ್ಲಿಮರು, ಪಾರ್ಸಿಗಳು ಹಾಗೂ ಕ್ರೈಸ್ತರಂತೆ ತಮ್ಮ ಧಾರ್ಮಿಕ ಸ್ಥಳಗಳನ್ನು ಸ್ಥಾಪಿಸಿ, ನಿರ್ವಹಣೆ ಮಾಡುವುದಕ್ಕೆ ಹಿಂದೂಗಳು, ಸಿಖ್ಖರು, ಜೈನರು ಹಾಗೂ ಬೌದ್ಧರಿಗೂ ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್‌ ಬುಧವಾರ ನಿರಾಕರಿಸಿದೆ.

‘ಇದು ಪ್ರಚಾರ ಪಡೆಯುವುದಕ್ಕಾಗಿ ಸಲ್ಲಿಸಿರುವ ಅರ್ಜಿ’ ಎಂದು ಹೇಳಿದ, ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠ, ‘ಈ ವಿಷಯವು ಸಂಸತ್‌ ವ್ಯಾಪ್ತಿಗೆ ಬರುತ್ತದೆಯಲ್ಲದೇ, ಇದರಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿತು.

‘ನೀವು ಸಮರ್ಪಕವಾದ ಅರ್ಜಿಯನ್ನು ಸಲ್ಲಿಸಿ. ಈ ತರಹದ ಅರ್ಜಿಗಳಿಗೆ ಪರಿಹಾರ ನೀಡಲು ಸಾಧ್ಯವೇ?  ಅರ್ಜಿಯನ್ನು ಕೂಡಲೇ ಹಿಂದಕ್ಕೆ ಪಡೆದು, ಪರಿಹಾರ ನೀಡಲು ಸಾಧ್ಯವಿರುವಂತಹ ಹಾಗೂ ತಿರುಳು ಇರುವಂತಹ ಮನವಿ ಸಲ್ಲಿಸಿ’ ಎಂದು ಪಿಐಎಲ್‌ ಸಲ್ಲಿಸಿರುವ ವಕೀಲ ಅಶ್ವಿನ್ ಉಪಾಧ್ಯಾಯ ಅವರನ್ನು ಉದ್ದೇಶಿಸಿ ನ್ಯಾಯಪೀಠ ಹೇಳಿತು.

ADVERTISEMENT

ದೇಶದಲ್ಲಿರುವ ಧಾರ್ಮಿಕ ಮತ್ತು ಚಾರಿಟಬಲ್ ದತ್ತಿಗಳ ನಿರ್ವಹಣೆಗೆ ಸಂಬಂಧಿಸಿ ಏಕರೂಪ ಸಂಹಿತೆ ರೂಪಿಸಬೇಕು. ತಮ್ಮ ಶ್ರದ್ಧಾಕೇಂದ್ರಗಳನ್ನು ನಿರ್ವಹಣೆ ಮಾಡುವುದಕ್ಕೆ ನಿರ್ದಿಷ್ಟ ಧರ್ಮದ, ನಂಬಿಕೆಗಳನ್ನು ಹೊಂದಿರುವವರಿಗೆ ಅವಕಾಶ ಕಲ್ಪಿಸಿರುವುದನ್ನು ಉಪಾಧ್ಯಾಯ ಅವರು ಪಿಐಎಲ್‌ನಲ್ಲಿ ಉಲ್ಲೇಖಿಸಿದ್ದರು.

ಇದೇ ವಿಚಾರವಾಗಿ ಸ್ವಾಮಿ ಜಿತೇಂದ್ರಾನಂದ ಸರಸ್ವತಿ ಅವರು ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಪೀಠ ತಿರಸ್ಕರಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.