ADVERTISEMENT

ಭೋಜಶಾಲಾ ಸಮೀಕ್ಷೆ ತಡೆಗೆ ಸುಪ್ರೀಂ ಕೋರ್ಟ್‌ ನಕಾರ

ಪಿಟಿಐ
Published 1 ಏಪ್ರಿಲ್ 2024, 14:47 IST
Last Updated 1 ಏಪ್ರಿಲ್ 2024, 14:47 IST
...
...   

ನವದೆಹಲಿ: ವಿವಾದಿತ ಭೋಜಶಾಲಾ–ಕಮಲ ಮೌಲಾ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) ಸರ್ವೇಯ ಬಳಿಕ ಅನುಮತಿಯಿಲ್ಲದೇ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ಸೂಚಿಸಿದೆ.

ಭೋಜಶಾಲಾ–ಕಮಲ ಮೌಲಾ ಸಂಕೀರ್ಣದ ಸಮೀಕ್ಷೆ ನಡೆಸುವಂತೆ ಮಧ್ಯಪ್ರದೇಶ ಹೈಕೋರ್ಟ್‌ ಮಾರ್ಚ್‌ 11ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮೌಲಾನಾ ಕಮಲುದ್ದೀನ್‌ ಕಲ್ಯಾಣ ಮಂಡಳಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್‌ ಮತ್ತು ಪಿ.ಕೆ ಮಿಶ್ರಾ ಅವರ ನ್ಯಾಯಾಪೀಠವು ಕೇಂದ್ರ ಸರ್ಕಾರ, ಮಧ್ಯಪ್ರದೇಶ ರಾಜ್ಯ ಸರ್ಕಾರ, ಎಎಸ್‌ಐಗೆ ಮತ್ತಿತರರಿಗೆ ನೋಟಿಸ್‌ ಜಾರಿ ಮಾಡಿತು.

‘ನಾಲ್ಕು ವಾರಗಳಲ್ಲಿ ನೋಟಿಸ್‌ಗೆ ಪ್ರತಿಕ್ರಿಯೆ ಕೊಡಬೇಕು. ನ್ಯಾಯಾಲಯದ ಅನುಮತಿಯಿಲ್ಲದೆ ಸಮೀಕ್ಷೆಯ ಫಲಿತಾಂಶದ ಆಧಾರದಲ್ಲಿ ಯಾವುದೇ ಕ್ರಮವನ್ನು ಕೈಗೊಳ್ಳುವಂತಿಲ್ಲ. ಸ್ಮಾರಕದ ಸ್ವರೂಪಕ್ಕೆ ಧಕ್ಕೆಯಾಗುವ ರೀತಿ ಯಾವುದೇ ಉತ್ಖನನ ನಡೆಸುವಂತಿಲ್ಲ’ ಎಂದು ಕೋರ್ಟ್‌ ಸೂಚಿಸಿದೆ.

ADVERTISEMENT

ಭಾರತೀಯ ಪುರಾತತ್ವ ಇಲಾಖೆಯಿಂದ ಸಂರಕ್ಷಿತವಾಗಿರುವ 11ನೇ ಶತಮಾನದ ಸ್ಮಾರಕವು ವಾಗ್ದೇವಿ(ಸರಸ್ವತಿ) ಮಂದಿರವೆಂಬುವುದು ಹಿಂದೂಗಳ ನಂಬಿಕೆಯಾಗಿದ್ದು, ಇದು ಕಮಲ ಮೌಲಾ ಮಸೀದಿಯೆಂದು ಮುಸ್ಲಿಂ ಸಮುದಾಯದ ನಂಬಿಕೆ.

2003ರಲ್ಲಿ ಎಎಸ್‌ಐ ನೀಡಿರುವ ಆದೇಶದ ಅನ್ವಯ ಭೋಜಶಾಲಾದಲ್ಲಿ ಪ್ರತಿ ಮಂಗಳವಾರ ಹಿಂದೂಗಳು ಪೂಜೆ ಮಾಡುತ್ತಾರೆ ಮತ್ತು ಪ್ರತಿ ಶುಕ್ರವಾರ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.