ADVERTISEMENT

OTT ನಿಯಂತ್ರಣಕ್ಕೆ ಸಂಸ್ಥೆ ರಚಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಕೋರ್ಟ್

ಪಿಟಿಐ
Published 18 ಅಕ್ಟೋಬರ್ 2024, 15:24 IST
Last Updated 18 ಅಕ್ಟೋಬರ್ 2024, 15:24 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಒಟಿಟಿ ಮತ್ತು ಇತರ ಆನ್‌ಲೈನ್‌ ವೇದಿಕೆಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕಾಗಿ ಸ್ವಾಯತ್ತ ಸಂಸ್ಥೆಯನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.

‘ಇಂತಹ ವಿಚಾರಗಳು ಕಾರ್ಯಾಂಗದ ನೀತಿ ನಿರೂಪಣೆ ವಿಭಾಗದ ವ್ಯಾಪ್ತಿಗೆ ಒಳಪಡುತ್ತದೆ ಮತ್ತು ಈ ಬಗ್ಗೆ ವಿವಿಧ ಪಾಲುದಾರರೊಂದಿಗೆ ದೀರ್ಘ ಸಮಾಲೋಚನೆ ನಡೆಸುವುದು ಅಗತ್ಯವಾಗಿರುತ್ತದೆ’ ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಮನೋಜ್‌ ಮಿಶ್ರಾ ಅವರಿದ್ದ ನ್ಯಾಯಪೀಠವು ಹೇಳಿದೆ.

ADVERTISEMENT

‘ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳದ್ದೇ ಸಮಸ್ಯೆಯಾಗುತ್ತಿದೆ. ಇದೆಲ್ಲ ಕಾರ್ಯಾಂಗಕ್ಕೆ ಸಂಬಂಧಿಸಿದ ವಿಚಾರ, ಇದರಿಂದಾಗಿ ಅಗತ್ಯವಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮರೆಯಾಗುತ್ತಿವೆ’ ಎಂದು ಪೀಠ ತಿಳಿಸಿದೆ.

ಅರ್ಜಿಯನ್ನು ಹಿಂಪಡೆಯಲು ಮತ್ತು ವಿಷಯಕ್ಕೆ ಸಂಬಂಧಿಸಿ ಕೇಂದ್ರ ಸಚಿವಾಲಯವನ್ನು ಸಂಪರ್ಕಿಸಲು ಅನುವು ನೀಡುವಂತೆ ಅರ್ಜಿದಾರ ವಕೀಲ ಶಶಾಂಕ್‌ ಶೇಖರ್‌ ಝಾ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ನ್ಯಾಯಾಲಯ ಅವರ ಅರ್ಜಿಯನ್ನು ವಜಾಗೊಳಿಸಿದೆ.

‘ಸಿನಿಮಾ ಪ್ರದರ್ಶನಗಳ ನಿಯಂತ್ರಣಕ್ಕೆ ಸಂಸ್ಥೆಯಿರುವಂತೆ, ಒಟಿಟಿ ವೇದಿಕೆಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಪರಿಶೀಲನೆಗೆ ಯಾವುದೇ ಸಂಸ್ಥೆ ಇಲ್ಲ. ಇದರಿಂದಾಗಿ ವಿವಾದಾತ್ಮಕ ವಿಡಿಯೊಗಳು ಪ್ರಸಾರವಾಗುತ್ತಿವೆ. ಒಟಿಟಿಗಳ ನಿಯಂತ್ರಣಕ್ಕೂ ಸಂಸ್ಥೆಯನ್ನು ರಚಿಸುವ ಅಗತ್ಯವಿದೆ’ ಎಂದು ಅರ್ಜಿದಾರರು ಮನವಿ ಮಾಡಿದ್ದರು.

‘40ಕ್ಕೂ ಅಧಿಕ ಒಟಿಟಿ ಮತ್ತು ವಿಡಿಯೊ ಪ‍್ರಸಾರ ವೇದಿಕೆಗಳು ವಾಣಿಜ್ಯ ಜಾಹಿರಾತು ಮತ್ತು ಉಚಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ಇದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವಾಗುತ್ತಿದೆ’ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.