ADVERTISEMENT

ಸಂಜೀವ್ ಭಟ್‌ ಅರ್ಜಿ ವಜಾ: ₹3 ಲಕ್ಷ ದಂಡ

ಪಿಟಿಐ
Published 3 ಅಕ್ಟೋಬರ್ 2023, 14:41 IST
Last Updated 3 ಅಕ್ಟೋಬರ್ 2023, 14:41 IST
   

ನವದೆಹಲಿ: ವಜಾಗೊಂಡಿರುವ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ ಸಲ್ಲಿಸಿದ್ದ ಮೂರು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.

ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಆರೋಪ ಕುರಿತು ವಿಚಾರಣೆ ನಡೆಸುತ್ತಿದ್ದ ಕೆಳಹಂತದ ನ್ಯಾಯಾಲಯದ ನ್ಯಾಯಾಧೀಶರು ತಾರತಮ್ಯ ಮಾಡುತ್ತಿದ್ದಾರೆ ಎಂಬ ಆರೋಪವನ್ನೂ ಒಳಗೊಂಡಿದ್ದ ಅರ್ಜಿಯೂ ಸೇರಿದಂತೆ ಮೂರು ಮೇಲ್ಮನವಿಗಳನ್ನು ಭಟ್‌ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಂ ನಾಥ್‌ ಮತ್ತು ರಾಜೇಶ್‌ ಬಿಂದಾಲ್‌ ಅವರನ್ನು ಒಳಗೊಂಡ ನ್ಯಾಯಪೀಠವು , ಪ್ರತಿ ಅರ್ಜಿಗೆ ತಲಾ ಒಂದು ಲಕ್ಷ ರೂಪಾಯಿಯಂತೆ ₹3 ಲಕ್ಷ ದಂಡ ವಿಧಿಸಿದೆ. ಈ ಹಣವನ್ನು ಗುಜರಾತ್‌ ಹೈಕೋರ್ಟ್‌ ವಕೀಲರ ಸಂಘದಲ್ಲಿ ಠೇವಣಿ ಇಡುವಂತೆ ಸೂಚಿಸಿದೆ.

ADVERTISEMENT

‘ಈ ಹಿಂದೆಯೂ ಇಂಥದ್ದೇ ಅರ್ಜಿ ಸಲ್ಲಿಸಿದ್ದರು’ ಎಂದು  ಭಟ್‌ ಪರ ವಕೀಲ ದೇವದತ್ತ ಕಾಮತ್‌ ಅವರಿಗೆ ನ್ಯಾಯಪೀಠ ನೆನಪು ಮಾಡಿತು. ಹಾಗೆಯೇ ಇಂಥದ್ದೇ ಅರ್ಜಿ ವಿಚಾರಣೆ ವೇಳೆ ಮತ್ತೊಂದು ನ್ಯಾಯಪೀಠ ನೀಡಿದ್ದ ಆದೇಶವನ್ನು ಪ್ರಸ್ತಾಪಿಸಿತು.  

ಕೆಳಹಂತದ ನ್ಯಾಯಾಲಯದ ವಿಚಾರಣೆಯ ಆಡಿಯೊ–ವಿಡಿಯೊ ರೆಕಾರ್ಡ್‌ ಮಾಡಲು ನಿರ್ದೇಶನ ನೀಡಬೇಕು ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಸಾಕ್ಷ್ಯ ಸಂಗ್ರಹಿಸಬೇಕು ಎಂದು ಉಳಿದ ಎರಡು ಅರ್ಜಿಗಳಲ್ಲಿ ಭಟ್‌ ಕೋರಿದ್ದರು.   ವ್ಯಕ್ತಿಯೊಬ್ಬರನ್ನು ಬಂಧಿಸುವ ಉದ್ದೇಶದಿಂದ ಅವರ ಮನೆಯಲ್ಲಿ ಮಾದಕ ವಸ್ತು ತಂದಿಟ್ಟ ಆರೋಪ ಪ್ರಕರಣದಲ್ಲಿ ಸಂಜೀವ್‌ ಭಟ್‌ ಅವರನ್ನು 2018ರಲ್ಲಿ  ಗುಜರಾತ್‌ ಸಿಐಡಿ ಬಂಧಿಸಿತ್ತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.