ನವದೆಹಲಿ: ಸಲಿಂಗ ಮದುವೆಗೆ ಮಾನ್ಯತೆ ನೀಡುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿರುವ ಸುಪ್ರೀಂಕೋರ್ಟ್, ತೀರ್ಪನ್ನು ಗುರುವಾರ ಕಾಯ್ದಿರಿಸಿತು.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ಸದಸ್ಯರಿರುವ ಸಂವಿಧಾನ ಪೀಠವು, ಹತ್ತನೇ ದಿನವೂ ಅರ್ಜಿಗಳ ವಿಚಾರಣೆ ನಡೆಸಿ, ತೀರ್ಪು ಕಾಯ್ದಿರಿಸಿತು. ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್, ಎಸ್.ಆರ್.ಭಟ್, ಹಿಮಾ ಕೊಹ್ಲಿ ಹಾಗೂ ಪಿ.ಎಸ್.ನರಸಿಂಹ ಈ ಪೀಠದಲ್ಲಿದ್ದಾರೆ.
ಅರ್ಜಿದಾರರ ಪರ ವಕೀಲರಾದ ಎ.ಎಂ.ಸಿಂಘ್ವಿ, ರಾಜು ರಾಮಚಂದ್ರನ್, ಕೆ.ವಿ.ವಿಶ್ವನಾಥನ್, ಆನಂದ್ ಗ್ರೋವರ್ ಹಾಗೂ ಸೌರಭ್ ಕೃಪಾಲ್ ಅವರು ಮಂಡಿಸಿದ ಪ್ರತಿವಾದವನ್ನು ನ್ಯಾಯಪೀಠ ಆಲಿಸಿತು.
ಬುಧವಾರ ನಡೆದ ವಿಚಾರಣೆ ವೇಳೆ ಕೇಂದ್ರ ಸರ್ಕಾರವು, ‘ಸಲಿಂಗಿಗಳ ಮದುವೆಯಿಂದಾಗುವ ಪರಿಣಾಮಗಳನ್ನು ಮುಂಗಾಣಲು, ಗ್ರಹಿಸಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ. ಹೀಗಾಗಿ ಸಲಿಂಗಿಗಳ ಮದುವೆಗೆ ನ್ಯಾಯಾಲಯವು ಕಾನೂನು ಮಾನ್ಯತೆ ನೀಡುವುದು ಸರಿಯಾದ ಕ್ರಮವಾಗುವುದಿಲ್ಲ’ ಎಂದು ವಾದಿಸಿತ್ತು.
ಈ ವಿಷಯ ಕುರಿತು ಏಳು ರಾಜ್ಯಗಳು ಪ್ರತಿಕ್ರಿಯೆ ನೀಡಿವೆ. ಸಲಿಂಗ ಮದುವೆಗೆ ಮಾನ್ಯತೆ ನೀಡಬೇಕು ಎಂಬ ಅರ್ಜಿದಾರರ ವಾದಕ್ಕೆ ರಾಜಸ್ಥಾನ, ಆಂಧ್ರಪ್ರದೇಶ ಹಾಗೂ ಅಸ್ಸಾಂ ಸರ್ಕಾರಗಳು ವಿರೋಧ ವ್ಯಕ್ತಪಡಿಸಿವೆ ಎಂದೂ ಕೇಂದ್ರ ಸರ್ಕಾರ ತಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.