ನವದೆಹಲಿ: ಅರಣ್ಯ ಸಂರಕ್ಷಣೆಗೆ ಹಲವು ನಿಯಮಗಳನ್ನು ಪ್ರಕಟಿಸಿರುವ ಸುಪ್ರೀಂ ಕೋರ್ಟ್, ಹೊಸದಾಗಿ ಮೃಗಾಲಯ ಆರಂಭಿಸಲು ಹಾಗೂ ಅರಣ್ಯ ಪ್ರದೇಶಗಳಲ್ಲಿ ಸಫಾರಿ ಆರಂಭಿಸಲು ತನ್ನ ಅನುಮತಿ ಪಡೆಯಬೇಕು ಎಂದು ಸೋಮವಾರ ತಾಕೀತು ಮಾಡಿದೆ.
2023ರಲ್ಲಿ ಅರಣ್ಯ ಸಂರಕ್ಷಣೆ ಕಾನೂನಿಗೆ ತರಲಾದ ತಿದ್ದುಪಡಿ ಅಡಿಯಲ್ಲಿ, ‘ಅರಣ್ಯ’ಕ್ಕೆ ನೀಡಿರುವ ವ್ಯಾಖ್ಯಾನವು ಸರಿಸುಮಾರು 1.99 ಲಕ್ಷ ಚದರ ಕಿ.ಮೀ. ಪ್ರದೇಶವನ್ನು ‘ಅರಣ್ಯ’ ವ್ಯಾಪ್ತಿಯಿಂದ ಹೊರಗಿರಿಸಿದ್ದು, ಈ ಪ್ರದೇಶವನ್ನು ಇತರ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಬಹುದು ಎಂಬ ಹೇಳಿಕೆಯನ್ನು ಕೋರ್ಟ್ ದಾಖಲಿಸಿಕೊಂಡಿದೆ.
2023ರ ಅರಣ್ಯ ಸಂರಕ್ಷಣಾ ಕಾನೂನಿಗೆ ತಂದಿರುವ ತಿದ್ದುಪಡಿಯನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರು ಇದ್ದ ತ್ರಿಸದಸ್ಯ ಪೀಠವು, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿನ ಅರಣ್ಯ ಪ್ರದೇಶದ ವಿವರವನ್ನು ಕೇಂದ್ರ ಸರ್ಕಾರಕ್ಕೆ ಮಾರ್ಚ್ 31ಕ್ಕೆ ಮೊದಲು ಸಲ್ಲಿಸಬೇಕು ಎಂದು ಸೂಚಿಸಿದೆ.
ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು ಸಲ್ಲಿಸುವ ‘ಅರಣ್ಯದಂತಹ ಪ್ರದೇಶ, ಮೀಸಲು ಅಥವಾ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಇಲ್ಲದ ಅರಣ್ಯ, ಸಮುದಾಯ ಅರಣ್ಯದ ವಿವರಗಳನ್ನು’ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಏಪ್ರಿಲ್ 15ಕ್ಕೆ ಮೊದಲು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಕೋರ್ಟ್ ಹೇಳಿದೆ.
‘ಅರಣ್ಯ ಜಮೀನಿನಲ್ಲಿ ಪೂರ್ವಾನುಮತಿ ಇಲ್ಲದೆ ಮೃಗಾಲಯ, ಸಫಾರಿ ಆರಂಭದ ಬಗ್ಗೆ ಅಧಿಸೂಚನೆ ಹೊರಡಿಸುವಂತಿಲ್ಲ... ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರಲ್ಲಿ ಉಲ್ಲೇಖಿಸಲಾದ, ಸರ್ಕಾರ ಅಥವಾ ಯಾವುದೇ ಪ್ರಾಧಿಕಾರದ ಮಾಲೀಕತ್ವದ ಮೃಗಾಲಯ, ಸಫಾರಿ ಆರಂಭಕ್ಕೆ ಸಂಬಂಧಿಸಿದ ಯಾವುದೇ ಪ್ರಸ್ತಾವನೆಯನ್ನು ಈ ಕೋರ್ಟ್‌ನ ಪೂರ್ವಾನುಮತಿ ಇಲ್ಲದೆ ಒಪ್ಪಿಕೊಳ್ಳುವಂತೆ ಇಲ್ಲ’ ಎಂದು ಪೀಠವು ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನಲ್ಲಿ ‘ಅರಣ್ಯ’ಕ್ಕೆ ಇದ್ದ ವಿಸ್ತೃತ ಅರ್ಥವನ್ನು ತಿದ್ದುಪಡಿ ಕಾನೂನು ಕಿರಿದಾಗಿಸಿದೆ ಎಂದು ಅರ್ಜಿದಾರರು ದೂರಿದ್ದಾರೆ. ತಿದ್ದುಪಡಿ ಕಾನೂನಿನ ಪ್ರಕಾರ, ಭೂಪ್ರದೇಶವೊಂದನ್ನು ಅರಣ್ಯ ಎಂದು ಪರಿಗಣಿಸಬೇಕಾದಲ್ಲಿ ಅದಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಪ್ರಕಟವಾಗಿರಬೇಕು ಅಥವಾ ಸರ್ಕಾರದ ದಾಖಲೆಗಳಲ್ಲಿ ಅದು ನಿರ್ದಿಷ್ಟವಾಗಿ ಅರಣ್ಯ ಎಂದು ನಮೂದಾಗಿರಬೇಕು.
ಸುಪ್ರೀಂ ಕೋರ್ಟ್‌ನ ಸೂಚನೆಗಳಿಗೆ ಅನುಗುಣವಾಗಿಯೇ ತಿದ್ದುಪಡಿಗಳನ್ನು ತರಲಾಗಿದೆ ಎಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಹೇಳಿದರು. ತಿದ್ದುಪಡಿ ಮಾಡಿರುವ ಕಾನೂನನ್ನು ಅಸಿಂಧುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.