ADVERTISEMENT

ರಾಜ್ಯವಾರು ಸಂಖ್ಯೆ ಆಧರಿಸಿ ‘ಅಲ್ಪಸಂಖ್ಯಾತ’ ವ್ಯಾಖ್ಯೆ: ಸುಪ್ರೀಂಕೋರ್ಟ್‌ಗೆ ಅರ್ಜಿ

ಪಿಟಿಐ
Published 19 ಜುಲೈ 2019, 19:45 IST
Last Updated 19 ಜುಲೈ 2019, 19:45 IST
   

ನವದೆಹಲಿ: ರಾಜ್ಯವಾರು ಜನಸಂಖ್ಯೆಯ ಆಧಾರದಲ್ಲಿ ಅಲ್ಪಸಂಖ್ಯಾತ ಸಮುದಾಯಗಳು ಯಾವುವು ಎಂದು ನಿರ್ಧರಿಸಬೇಕೇ ವಿನಃ ರಾಷ್ಟ್ರೀಯ ಸರಾಸರಿ ಜನಸಂಖ್ಯೆಯ ಆಧಾರದಲ್ಲಿ ಅಲ್ಲ ಎಂದು ಕೋರಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಿಚಾರಣೆ ನಡೆಸಿತು. ಈ ಅರ್ಜಿ ವಿಚಾರಣೆಯಲ್ಲಿ ನೆರವು ನೀಡಬೇಕು ಎಂದು ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಅವರನ್ನು ಕೇಳಿಕೊಂಡಿತು.

ಇಡೀ ದೇಶದ ಜನಸಂಖ್ಯೆಯ ಆಧಾರದಲ್ಲಿ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರುತಿಸುವುದು ಕಾನೂನುಬಾಹಿರ ಎಂದ ಹಿರಿಯ ವಕೀಲ ಮುಕುಲ್‌ ರೋಹಟಗಿ ವಾದಿಸಿದರು.

ಬಿಜೆಪಿ ಮುಖಂಡ ಅಶ್ವಿನಿ ಕುಮಾರ್‌ ಉಪಾಧ್ಯಾಯ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ನ್ಯಾಯಪೀಠವು, ಅರ್ಜಿಯ ಪ್ರತಿಯೊಂದನ್ನು ಅಟಾರ್ನಿ ಜನರಲ್‌ ಕಚೇರಿಗೆ ತಲುಪಿಸುವಂತೆ ಸೂಚಿಸಿತು. ನಾಲ್ಕು ವಾರಗಳ ಬಳಿಕ ಅರ್ಜಿಯ ವಿಚಾರಣೆ ಮುಂದುವರಿಸುವುದಾಗಿ ತಿಳಿಸಿತು.

ADVERTISEMENT

ಮುಸ್ಲಿಂ, ಕ್ರೈಸ್ತ, ಸಿಖ್‌, ಬೌದ್ಧ ಮತ್ತು ಪಾರ್ಸಿ ಅಲ್ಪಸಂಖ್ಯಾತ ಸಮುದಾಯಗಳು ಎಂದು 26 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಈ ಅರ್ಜಿ ಸಲ್ಲಿಸಲಾಗಿದೆ.

ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಕಾಯ್ದೆ 1992ರ ಸೆಕ್ಷನ್‌ 2 (ಸಿ) ಅಡಿಯಲ್ಲಿ 1993ರ ಅಕ್ಟೋಬರ್‌ 23ರಂದು ಕೇಂದ್ರ ಸರ್ಕಾರವು ಈ ಅಧಿಸೂಚನೆ ಹೊರಡಿಸಿತ್ತು. ಇದನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಆರೋಗ್ಯ, ಶಿಕ್ಷಣ, ವಸತಿ ಮತ್ತು ಜೀವನೋಪಾಯದ ಮೂಲಭೂತ ಹಕ್ಕನ್ನೇ ಈ ಅಧಿಸೂಚನೆಯು ಉಲ್ಲಂಘಿಸುತ್ತದೆ ಎಂದು ಅವರು ವಾದಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿ ಗೃಹ ಸಚಿವಾಲಯ, ಕಾನೂನು ಸಚಿವಾಲಯ ಮತ್ತು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗಕ್ಕೆ ಸಲ್ಲಿಸಿದ ಮನವಿಗಳಿಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ರೋಹಟಗಿ ತಿಳಿಸಿದರು.

ರಾಷ್ಟ್ರೀಯ ಸರಾಸರಿಯ ಬದಲಿಗೆ ರಾಜ್ಯವಾರು ಜನಸಂಖ್ಯೆಯ ಆಧಾರದಲ್ಲಿಯೇ ‘ಅಲ್ಪಸಂಖ್ಯಾತ’ ಪದವನ್ನು ವ್ಯಾಖ್ಯಾನಿಸಬೇಕು ಎಂಬುದು ಅರ್ಜಿದಾರರ ಪ್ರಮುಖ ಕೋರಿಕೆಯಾಗಿದೆ.

ರಾಷ್ಟ್ರೀಯ ಸರಾಸರಿಯಲ್ಲಿ ಹಿಂದೂ ಸಮುದಾಯವು ಬಹುಸಂಖ್ಯಾತ. ಆದರೆ, ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯದ ಹಲವು ರಾಜ್ಯಗಳಲ್ಲಿ ಈ ಸಮುದಾಯ ಅಲ್ಪಸಂಖ್ಯಾತ. ಆದರೆ, ಇವರಿಗೆ ಅಲ್ಪಸಂಖ್ಯಾತರಿಗೆ ಸಿಗುವ ಸವಲತ್ತುಗಳು ಸಿಗುತ್ತಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.