ADVERTISEMENT

48 ಗಂಟೆಗಳಲ್ಲಿ ಮತದಾನದ ಅಂಕಿಅಂಶ ಬಿಡುಗಡೆ: ಚು.ಆಯೋಗದ ಪ್ರತಿಕ್ರಿಯೆ ಕೇಳಿದ SC

ಪಿಟಿಐ
Published 17 ಮೇ 2024, 14:36 IST
Last Updated 17 ಮೇ 2024, 14:36 IST
   

ನವದೆಹಲಿ: ಲೋಕಸಭಾ ಚುನಾವಣೆಯ ಮತದಾನ ನಡೆದು 48 ಗಂಟೆಗಳಲ್ಲಿ ವೆಬ್‌ಸೈಟ್‌ನಲ್ಲಿ ಮತಗಟ್ಟೆವಾರು ಮತದಾನದ ಅಂಕಿ ಅಂಶ ಪ್ರಕಟಣೆಗೆ ನಿರ್ದೇಶನ ಕೋರಿ ಸರ್ಕಾರೇತರ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಕುರಿತಂತೆ ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ನೇತೃತ್ವದ ಪೀಠವು, ಸಂಜೆ 6.30ರ ವೇಳೆಗೆ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿತು.

ಈ ಸಂಬಂಧ ಚುನಾವಣಾ ಆಯೋಗಕ್ಕೆ ಪ್ರತಿಕ್ರಿಯೆ ನೀಡಲು ಕೆಲ ಕಾಲ ಸಮಯ ನೀಡಲಾಗಿದ್ದು, ಮೇ 24ಕ್ಕೆ ನ್ಯಾಯಾಲಯದ ರಜಾ ಕಾಲದ ಅವಧಿಯಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಪೀಠ ಹೇಳಿದೆ.

ADVERTISEMENT

ಈ ಬಗ್ಗೆ ಮಧ್ಯಾಹ್ನವೇ ಪೀಠದ ಗಮನ ಸೆಳೆದಿದ್ದ ಎನ್‌ಜಿಒ ಪರ ವಕೀಲ ಪ್ರಶಾಂತ್ ಭೂಷಣ್, ಆದಷ್ಟು ಬೇಗ ಅರ್ಜಿ ವಿಚಾರಣೆಗೆ ಕೋರಿದ್ದರು.

ಎಲ್ಲ ಮತಗಟ್ಟೆಗಳ ಮತದಾನದ ನಂತರ ಕೂಡಲೇ ಮತದಾನದ ಮಾಹಿತಿಯನ್ನು ಅಪ್‌ಲೋಡ್ ಮಾಡಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಕೋರಿ ಕಳೆದ ವಾರ ಎಡಿಆರ್ ಮಧ್ಯಂತರ ಅರ್ಜಿ ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.