ADVERTISEMENT

ನ್ಯಾಯಮೂರ್ತಿಗಳ ನೇಮಕಾತಿ: ಮಾಹಿತಿ ಕೇಳಿದ ‘ಸುಪ್ರೀಂ ಕೋರ್ಟ್

ಪಿಟಿಐ
Published 20 ಸೆಪ್ಟೆಂಬರ್ 2024, 15:40 IST
Last Updated 20 ಸೆಪ್ಟೆಂಬರ್ 2024, 15:40 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ಹೈಕೋರ್ಟ್‌ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಮತ್ತೆ ಮತ್ತೆ ಕಳುಹಿಸಿಕೊಟ್ಟ ಹೆಸರುಗಳ ಬಗ್ಗೆ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್‌, ಶುಕ್ರವಾರ ಕೇಂದ್ರ ಸರ್ಕಾರವನ್ನು ಕೇಳಿದೆ. 

ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿರುವ ನ್ಯಾಯಮೂರ್ತಿಗಳ ನೇಮಕಾತಿ ಸಂಬಂಧದ ಅಧಿಸೂಚನೆಗೆ ಕಾಲಮಿತಿ ನಿಗದಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ವಕೀಲ ಹರ್ಷ ವಿಭೋರ್ ಸಿಂಘಾಲ್ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಪೀಠವು ಈ ನಿರ್ದೇಶನ ನೀಡಿದೆ.

‘ಕೊಲಿಜಿಯಂ ಮತ್ತೆ ಮತ್ತೆ ಕಳುಹಿಸಿಕೊಟ್ಟ ಹೆಸರುಗಳು ಎಷ್ಟಿವೆ ಎಂಬುದರ ಪಟ್ಟಿ ಮಾಡಿ. ಅವರ ನೇಮಕಾತಿ ಏಕೆ ಬಾಕಿಯಿದೆ ಮತ್ತು ನೇಮಕಾತಿ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂಬುದರ ಮಾಹಿತಿ ಕೊಡಿ’ ಎಂದು ಪೀಠವು ಕೇಂದ್ರ ಸರ್ಕಾರದ ಪರ ಹಾಜರಿದ್ದ ಅಟಾರ್ನಿ ಜನರಲ್‌ ಆರ್‌.ವೆಂಕಟರಮಣಿ ಅವರಲ್ಲಿ ಕೇಳಿತು. ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಮನೋಜ್‌ ಮಿಶ್ರಾ ಅವರೂ ಪೀಠದಲ್ಲಿದ್ದಾರೆ. 

ADVERTISEMENT

ಆ ಬಳಿಕ ಅಟಾರ್ನಿ ಜನರಲ್‌ ಮಾಡಿದ ಮನವಿಯನ್ನು ಪರಿಗಣಿಸಿದ ಪೀಠವು, ವಿಚಾರಣೆಯನ್ನು ಮುಂದೂಡಿತು.

‘ನ್ಯಾಯಮೂರ್ತಿಗಳ ನೇಮಕಾತಿ ಅಧಿಸೂಚನೆಯನ್ನು ಸರ್ಕಾರವು ತನ್ನ ಇಚ್ಛೆಗೆ ತಕ್ಕಂತೆ ವಿಳಂಬಗೊಳಿಸುತ್ತಿದ್ದು, ಆ ಮೂಲಕ ನ್ಯಾಯಾಂಗದ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ’ ಎಂದು ಅರ್ಜಿದಾರರು ದೂರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.