ನವದೆಹಲಿ: ಹಂದಿ ಸಾಕಣಿಕೆಯಲ್ಲಿ ತೊಡಗಿರುವ ಅಲೆಮಾರಿ ಬುಡಕಟ್ಟಿಗೆ ಸೇರಿದ ಕೊರಮ, ಕೊರವ ಮತ್ತು ಕೊರಚ ಸಮುದಾಯಗಳ ಪುನರ್ವಸತಿಗೆ ಕೈಗೊಂಡಿರುವ ಕ್ರಮಗಳನ್ನು ಕುರಿತು ಮಾಹಿತಿ ಒದಗಿಸುವಂತೆ ಸುಪ್ರೀಂ ಕೋರ್ಟ್, ದಾವಣಗೆರೆ ಮಹಾನಗರ ಪಾಲಿಕೆಯ ಆಯುಕ್ತರಿಗೆ ಸೂಚನೆ ನೀಡಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಅಭಯ್ ಎಸ್. ಓಕಾ ಅವರನ್ನೊಳಗೊಂಡ ನ್ಯಾಯಪೀಠವು, ಹಂದಿ ಸಾಕಣೆ ಕೊರಚ, ಕೊರವ ಮತ್ತು ಕೊರಮ ಸಮುದಾಯಗಳ ಪುನರ್ವಸತಿಗೆ ಸಂಬಂಧಿಸಿದಂತೆ ನಾಲ್ಕು ವಾರಗಳ ಅವಧಿಯಲ್ಲಿ ಅಫಿಡ್‌ವಿಟ್ ಸಲ್ಲಿಸುವಂತೆ ನಿರ್ದೇಶನ ನೀಡಿದೆ.
ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಎನ್‌ಜಿಒವೊಂದರ ಪರವಾಗಿ ಕ್ರಮವಾಗಿ ವಕೀಲರಾದ ಸಂಜಯ್ ಎಂ. ನುಲಿ ಮತ್ತು ಅನಿತಾ ಶೆಣೈ ಅವರು ವಾದ ಮಂಡಿಸಿದ್ದರು.
ದಾವಣಗೆರೆ ನಗರದ ಹಂದಿಗಳಿಗೆ ಚಿತ್ರದುರ್ಗದ ಗುಡ್ಡ ಪ್ರದೇಶಗಳಲ್ಲಿ ಪುನರ್ ವಸತಿ ಕಲ್ಪಿಸಬೇಕು ಮತ್ತು 500ರಿಂದ 600 ಹಂದಿಗಳ ಸಾಕಣಿಕೆಯ ವೆಚ್ಚವನ್ನು ಪಾವತಿಸಬೇಕು ಎಂದು ಎಂದು ಕರ್ನಾಟಕ ಹೈಕೋರ್ಟ್ ಪಾಲಿಕೆ ಆಯುಕ್ತರಿಗೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಆಯುಕ್ತರು ಸುಪ್ರೀಂ ಕೋರ್ಟ್ ಮೊರೆ ಹೊಕ್ಕಿದ್ದರು. 2019ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್, ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತ್ತು.
ಸಾಲ್ಮೊನೆಲೋಸಿಸ್, ರಿಂಗ್ ವರ್ಮ್, ಹೆಪಟೈಟಿಸ್- ಇ, ಎಚ್1ಎನ್1, ಹಂದಿಜ್ವರ, ಬ್ರೂಸೆಲ್ಲೋಸಿಸ್, ಟೊಕ್ಸೊಪ್ಲಾಸ್ಮಾಸಿಸ್, ಕ್ಷಯ, ಆಂಥ್ರಾಕ್ಸ್‌ನಂತಹ ಮಾರಣಾಂತಿಕ ಕಾಯಿಲೆಗಳು ಹರಡುವ ಭೀತಿಯಿಂದ ಬಿಡಾಡಿ ಹಂದಿಗಳನ್ನು ಸ್ಥಳಾಂತರಿಸಬೇಕು ಎಂದು 2018ರ ಅ. 26ರಂದು ಆದೇಶ ಹೊರಡಿಸಲಾಗಿತ್ತು.
ಆದರೆ, ಈ ಆದೇಶವನ್ನು ಉಲ್ಲಂಘಿಸಿ ದಾವಣಗೆರೆ ಮಹಾನಗರ ಪಾಲಿಕೆಯು, ಅಲೆಮಾರಿ ಬುಡಕಟ್ಟಿಗೆ ಸೇರಿದ ಕೊರಮ, ಕೊರವ ಮತ್ತು ಕೊರಚ ಸಮುದಾಯಗಳು ಸಾಕಿದ್ದ ಹಂದಿಗಳನ್ನು ನಗರದಿಂದ ಸುಮಾರು 60 ಕಿ.ಮೀ. ದೂರಕ್ಕೆ ಸಾಗಿಸಿತ್ತು ಎಂದು ಅಖಿಲ ಕರ್ನಾಟಕ ಕುಳುವ ಮಹಾಸಂಘವು ರಾಜ್ಯ ಹೈಕೋರ್ಟ್‌ಗೆ ಮೊರೆ ಹೋಗಿತ್ತು.
ದಾವಣಗೆರೆ ಅಥವಾ ರಾಜ್ಯದ ಯಾವುದೇ ಸ್ಥಳದಿಂದ ಹಂದಿಗಳನ್ನು ಹಿಡಿದು ಹೊರ ರಾಜ್ಯಗಳಿಗೆ ಸಾಗಾಟ ಮಾಡಬಾರದು. ಈ ಸಮುದಾಯಗಳನ್ನು ಆರ್ಥಿಕವಾಗಿ ಸದೃಢಗೊಳಿಸಲು ಮತ್ತು ಮುಖ್ಯವಾಹಿನಿಗೆ ತರಲು ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ 2019ರಂದು ಏಪ್ರಿಲ್ 22ರಂದು ಆದೇಶ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.