ನವದೆಹಲಿ: ರಾಜಕೀಯ ಲಾಭಕ್ಕಾಗಿ ಶರದ್ ಪವಾರ್ ಅವರ ಹೆಸರು, ಭಾವಚಿತ್ರ ಬಳಸಲಾಗುತ್ತಿದೆ ಎಂಬ ಆಕ್ಷೇಪ ಕುರಿತು ಪ್ರತಿಕ್ರಿಯಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಅಜಿತ್ ಪವಾರ್ ಬಣಕ್ಕೆ ಸೂಚಿಸಿದೆ.
ಶರದ್ ಪವಾರ್ ಬಣವು ಈ ಸಂಬಂಧ ಅರ್ಜಿ ಸಲ್ಲಿಸಿತ್ತು. ಉಪ ಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಬಣಕ್ಕೆ ನೋಟಿಸ್ ನೀಡಿದ ನ್ಯಾಯಪೀಠ, ಪ್ರಕರಣದ ವಿಚಾರಣೆಯನ್ನು ಮಾರ್ಚ್ 19ಕ್ಕೆ ಮುಂದೂಡಿತು.
ಶರದ್ ಪವಾರ್ ಅವರ ಹೆಸರು ಮತ್ತು ಭಾವಚಿತ್ರ ಬಳಸುವುದಿಲ್ಲ ಎಂಬ ಕುರಿತು ಸ್ಪಷ್ಟ ಪ್ರತಿಕ್ರಿಯೆ ಬೇಕು ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆ.ವಿ.ವಿಶ್ವನಾಥನ್ ಅವರಿದ್ದ ನ್ಯಾಯಪೀಠವು ತಿಳಿಸಿತು.
ಈ ಹಿಂದೆ, ಶರದ್ ಪವಾರ್ ಬಣಕ್ಕೆ ‘ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ –ಶರದ್‌ಚಂದ್ರ ಪವಾರ್’ ಎಂದು ಹೆಸರು ನೀಡಿ ಚುನಾವಣಾ ಆಯೋಗವು ಫೆ.7ರಂದು ನೀಡಿದ್ದ ಆದೇಶ ಮುಂದಿನ ಆದೇಶದವಗೂ ಚಾಲ್ತಿಯಲ್ಲಿರಲಿದೆ ಎಂದು ತಿಳಿಸಿತು.
ಅಲ್ಲದೆ, ಅಜಿತ್ ಪವಾರ್ ನೇತೃತ್ವದ ಬಣವೇ ನಿಜವಾದ ಎನ್‌ಸಿಪಿ ಎಂದು ಆಯೋಗವು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಶರದ್ ಪವಾರ್ ಬಣವು ಸಲ್ಲಿಸಿದ್ದ ಅರ್ಜಿ ಕುರಿತು ಪ್ರತಿಕ್ರಿಯೆಯನ್ನು ದಾಖಲಿಸುವಂತೆಯೂ ಸೂಚಿಸಿತು.
ಯಶವಂತರಾವ್ ಚವಾಣ್ ಹೆಸರು ಭಾವಚಿತ್ರ ಬಳಸುತ್ತಿದ್ದೇವೆ –ಡಿಸಿಎಂ
ಭಾವಚಿತ್ರ ಬಳಕೆ ಕುರಿತು ಶರದ್ ಪವಾರ್ ಬಣದ ಆಕ್ಷೇಪದ ಬಳಿಕ ತಮ್ಮ ನೇತೃತ್ವದ ಎನ್‌ಸಿಪಿಯು ರಾಜ್ಯದ ಪ್ರಥಮ ಮುಖ್ಯಮಂತ್ರಿ ಯಶವಂತರಾವ್ ಚವಾಣ್ ಅವರ ಹೆಸರು ಭಾವಚಿತ್ರ ಬಳಸುತ್ತಿದೆ ಎಂದು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ತಿಳಿಸಿದ್ದಾರೆ. ‘ಪಕ್ಷ ಇಬ್ಭಾಗವಾದ ಆರಂಭದಲ್ಲಿ ಶರದ್ ಪವಾರ್‌ರ ಹೆಸರು ಚಿತ್ರ ಬಳಸಲಾಗುತ್ತಿತ್ತು. ಇದಕ್ಕೆ ಆಕ್ಷೇಪ ವ್ಯಕ್ತವಾದ ಬಳಿಕ ನಿಲ್ಲಿಸಿದ್ದು ಯಶವಂತರಾವ್ ಚವಾಣ್ ಅವರ ಹೆಸರು ಭಾವಚಿತ್ರ ಬಳಸುತ್ತಿದ್ದೇವೆ. ಇದನ್ನೇ ಮುಂದಿಟ್ಟು ಜನರ ಎದುರು ಹೋಗುತ್ತಿದ್ದೇವೆ’ ಎಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.