ನವದೆಹಲಿ: ದೆಹಲಿ ಮತ್ತು ಸುತ್ತಮುತ್ತಲಿನ ವಾಯುಮಾಲಿನ್ಯವನ್ನು ನಿಯಂತ್ರಿಸಲು ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್, ಮಂಗಳವಾರ ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ (ಸಿಎಕ್ಯೂಎಂ) ಸೂಚನೆ ನೀಡಿದೆ.
ಚಳಿಗಾಲ ಸಮೀಪಿಸುತ್ತಿದ್ದಂತೆ ವಾಯು ಮಾಲಿನ್ಯದ ಸಮಸ್ಯೆಗೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರಿದ್ದ ಪೀಠ ಈ ನಿರ್ದೇಶನ ನೀಡಿದೆ.
ದೆಹಲಿಯ ಗಂಭೀರ ವಾಯು ಮಾಲಿನ್ಯ ಪ್ರಕರಣದಲ್ಲಿ ವಕೀಲ ಅಪರಾಜಿತಾ ಸಿಂಗ್, ದೀಪಾವಳಿ ಸಮೀಪಿಸುತ್ತಿರುವಂತೆ ವಾಯು ಮಾಲಿನ್ಯದ ಸಮಸ್ಯೆ ಮತ್ತು ಬೆಳೆ ಅವಶೇಷಗಳನ್ನು ಸುಡುವ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಿದರು. ಈ ಸಮಸ್ಯೆಗಳ ಬಗ್ಗೆ ಆಯೋಗ ವ್ಯವಹರಿಸುತ್ತಿದೆ ಎಂದ ಅವರು, ಮಾಲಿನ್ಯ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ವರದಿ ನೀಡುವಂತೆ ಸೂಚಿಸಿದರು.
ಚಳಿಗಾಲದ ಆರಂಭದ ಜೊತೆಗೆ ಬೆಳೆಗಳ ಅವಶೇಷಗಳನ್ನು ಸುಡುವುದರೊಂದಿಗೆ ವಾಯು ಮಾಲಿನ್ಯದ ಗಂಭೀರ ಸಮಸ್ಯೆಯನ್ನು ಅಪರಾಜಿತಾ ಸಿಂಗ್ ಎತ್ತಿ ತೋರಿಸಿದ್ದಾರೆ. ಈ ಎಲ್ಲಾ ಸಮಸ್ಯೆಗಳು ವಾಯು ಗುಣಮಟ್ಟ ನಿರ್ವಹಣಾ ಆಯೋಗದ ಮುಂದೆ ಇವೆ. ವಾಯು ಮಾಲಿನ್ಯವನ್ನು ತಡೆಗಟ್ಟಲು ತೆಗೆದುಕೊಂಡ ಕ್ರಮಗಳ ಬಗ್ಗೆ ನಾವು ಸಿಎಕ್ಯೂಎಂನ್ನು ಕೇಳುತ್ತೇವೆ. ಅಲ್ಲದೇ ರಾಜಧಾನಿಯ ಸುತ್ತಲಿನ ಪ್ರದೇಶದ ವರದಿಯನ್ನು ತಕ್ಷಣ ಸಲ್ಲಿಸಲು ಸೂಚಿಸಲಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅಕ್ಟೋಬರ್ 31ಕ್ಕೆ ನಿಗದಿಪಡಿಸಿದೆ. ಇನ್ನು ಪರಿಸರ ಸಮಸ್ಯೆಗಳಿಗೆ ಸಂಬಂಧಿಸಿದ ಎಂಸಿ ಮೆಹ್ತಾ ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.