ADVERTISEMENT

NEET-UG 2024 | ಅಕ್ರಮ ಆರೋಪ: ಕೇಂದ್ರ, ಎನ್‌ಟಿಎಗೆ ಸುಪ್ರೀಂ ಕೋರ್ಟ್ ನೋಟಿಸ್‌

ಪಿಟಿಐ
Published 14 ಜೂನ್ 2024, 7:52 IST
Last Updated 14 ಜೂನ್ 2024, 7:52 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ‘ನೀಟ್‌–ಯುಜಿ’ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ಅಕ್ರಮ ಆರೋಪಗಳ ಕುರಿತು ಸಿಬಿಐ ತನಿಖೆಗೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಮತ್ತು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ (ಎನ್‌ಟಿಎ) ಸುಪ್ರೀಂ ಕೋರ್ಟ್‌ ಶುಕ್ರವಾರ ನೋಟಿಸ್‌ ನೀಡಿದೆ.

ಹಿತೇನ್‌ ಸಿಂಗ್‌ ಕಶ್ಯಪ್‌ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್‌) ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್ ಮತ್ತು ಸಂದೀಪ್‌ ಮೆಹ್ತಾ ಅವರ ರಜಾಕಾಲದ ಪೀಠವು, ಈ ಕುರಿತು ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಬಿಹಾರ ಸರ್ಕಾರಕ್ಕೂ ನೋಟಿಸ್‌ ನೀಡಿದ್ದು, ಎರಡು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.

ರಾಜಸ್ಥಾನದ ಕೋಟಾದಲ್ಲಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಕೀಲರೊಬ್ಬರು ಈ ವೇಳೆ ವಾದಿಸಿದಾಗ, ಅಂತಹ ಘಟನೆಗಳು ನೀಟ್‌–ಯುಜಿ ಫಲಿತಾಂಶಗಳಿಗೆ ಸಂಬಂಧಿಸಿಲ್ಲ. ಆದ್ದರಿಂದ ಅನಗತ್ಯವಾಗಿ ಭಾವನಾತ್ಮಕ ವಾದಗಳನ್ನು ಮಾಡಬೇಡಿ ಎಂದು ಪೀಠ ತಾಕೀತು ಮಾಡಿತು.

ADVERTISEMENT

ಅರ್ಜಿದಾರರ ಪರ ವಕೀಲರು ಸಿಬಿಐ ತನಿಖೆಗೆ ಒತ್ತಾಯಿಸಿದಾಗ, ಆ ಕುರಿತು ಏಕ ಪಕ್ಷೀಯವಾಗಿ ಆದೇಶಿಸಲು ಸಾಧ್ಯವಿಲ್ಲ ಎಂದ ಪೀಠ, ಕೇಂದ್ರ ಮತ್ತು ಎನ್‌ಟಿಎ ಪ್ರತಿಕ್ರಿಯೆ ಸಲ್ಲಿಸಿದ ಬಳಿಕ ಪರಿಶೀಲಿಸಲಾಗುವುದು ಎಂದು ತಿಳಿಸಿತು. 

ಇದು ಸುಮಾರು 24 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಎಂದು ಮತ್ತೊಬ್ಬ ವಕೀಲರು ವಾದಿಸಿದಾಗ, ಆ ಕುರಿತು ತಮಗೆ ಅರಿವಿದೆ ಎಂದು ಪೀಠ ಹೇಳಿತು. ಅಲ್ಲದೆ ನೀಟ್‌–ಯುಜಿ ಕುರಿತು ಬಾಕಿ ಉಳಿದಿರುವ ಇತರ ಅರ್ಜಿಗಳೊಂದಿಗೆ ಈ ಪಿಐಎಲ್‌ ಅನ್ನೂ ಜುಲೈ 8ರಂದು ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದಿತು.

ಬಿಹಾರ ಮತ್ತು ಇತರ ರಾಜ್ಯಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ಪರೀಕ್ಷಾ ಅಕ್ರಮಗಳು ನಡೆದಿರುವ ಕುರಿತ ಆರೋಪಗಳು ಕೇಳಿ ಬಂದಿದ್ದವು.

‘ಸುಪ್ರೀಂ’ಗೆ ವರ್ಗಾಯಿಸಲು ಎನ್‌ಟಿಎ ಮನವಿ:

‘ನೀಟ್‌–ಯುಜಿ’ ಕುರಿತು ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಇದನ್ನು ಆಧರಿಸಿ ಪೀಠವು ಇತರ ಅರ್ಜಿದಾರರಿಗೆ ನೋಟಿಸ್‌ ಜಾರಿಗೊಳಿಸಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ, ಇತರ ಪರೀಕ್ಷಾ ಅಕ್ರಮಗಳ ಕಾರಣ 2024ರ ನೀಟ್‌ ಪರೀಕ್ಷೆಯನ್ನು ರದ್ದುಪಡಿಸಬೇಕು ಎಂಬ ಕೋರಿಕೆಯ ಹಲವು ಅರ್ಜಿಗಳು ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಇವೆ. ಅವುಗಳನ್ನೆಲ್ಲ ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸುವಂತೆ ಎನ್‌ಟಿಎ ಅರ್ಜಿಯಲ್ಲಿ ಕೋರಿದೆ.

ಈ ಕುರಿತು ದೆಹಲಿ, ಕಲ್ಕತ್ತ, ಛತ್ತೀಸಗಢ ಮತ್ತು ಇತರ ಹೈಕೋರ್ಟ್‌ಗಳಲ್ಲಿ ಅರ್ಜಿ ಸಲ್ಲಿಸಿದವರಿಗೆ ನೋಟಿಸ್‌ ಜಾರಿಗೊಳಿಸಿದ ಪೀಠವು, ಜುಲೈ 8ರಂದು ವಿಚಾರಣೆಗೆ ತೆಗೆದುಕೊಳ್ಳುವುದಾಗಿ ತಿಳಿಸಿದೆ. 

ಜುಲೈ 6ರಿಂದ ಪ್ರಾರಂಭವಾಗುವ ಕೌನ್ಸೆಲಿಂಗ್‌ ಅನ್ನು ಅಮಾನತುಗೊಳಿಸಲು ನಿರ್ದೇಶಿಸಬೇಕು ಎಂದು ವಕೀಲರೊಬ್ಬರು ಕೋರಿದರು. ಆ ಮನವಿಯನ್ನು ಪೀಠ ತಿರಸ್ಕರಿಸಿತ್ತು. ಈ ಹಿಂದೆಯೂ ಇಂತಹ ಮನವಿಯನ್ನು ನ್ಯಾಯಾಲಯ ತಿರಿಸ್ಕರಿಸಿತ್ತು. 

ಮೇ 5ರಂದು ನಡೆದಿದ್ದ ನೀಟ್‌ ಪರೀಕ್ಷೆಯಲ್ಲಿ ಪರೀಕ್ಷಾ ಸಮಯ ನಷ್ಟವಾದ 1,563 ಅಭ್ಯರ್ಥಿಗಳಿಗೆ ನೀಡಲಾಗಿದ್ದ ಕೃಪಾಂಕವನ್ನು ಹಿಂಪಡೆಯುವುದಾಗಿ ಮತ್ತು ಆ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಡೆಸುವುದಾಗಿ ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. 

ನೀಟ್‌– ಪರೀಕ್ಷಾ ನಿರ್ವಹಣೆಯಲ್ಲಿ ಅಕ್ರಮ ಸಹಿಸಲ್ಲ: ಧರ್ಮೇಂದ್ರ ಪ್ರಧಾನ್‌
ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ ‘ನೀಟ್‌–ಯುಜಿ’ ನಿರ್ವಹಣೆಯಲ್ಲಿ ಯಾವುದೇ ಅಕ್ರಮ ಅಥವಾ ಅವ್ಯವಹಾರಗಳನ್ನು ಸರ್ಕಾರ ಸಹಿಸುವುದಿಲ್ಲ. ಈ ಕುರಿತು ಲೋಪಗಳು ಕಂಡುಬಂದಲ್ಲಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯನ್ನು (ಎನ್‌ಟಿಎ) ಹೊಣೆಗಾರನನ್ನಾಗಿ ಮಾಡಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಶುಕ್ರವಾರ ಹೇಳಿದ್ದಾರೆ. ಪ್ರಶ್ನೆ ಪತ್ರಿಕೆಯನ್ನು ತಪ್ಪಾಗಿ ವಿತರಿಸಿದ ಆರು ಕೇಂದ್ರಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದ ಅವರು ‘ಪ್ರತಿ ಅಂಶವನ್ನೂ ಪರಿಶೀಲಿಸಲಾಗುತ್ತಿದ್ದು ಹೊಣೆಗಾರಿಕೆಯನ್ನು ನಿಗದಿಪಡಿಸಲಾಗುವುದು. ಲೋಪದ ಸ್ವರೂಪವನ್ನು ಆಧರಿಸಿ ಕ್ರಮ ಜರುಗಿಸಲಾಗುವುದು’ ಎಂದು ಪಿಟಿಐಗೆ ತಿಳಿಸಿದ್ದಾರೆ. ಈ ಕೇಂದ್ರಗಳಲ್ಲಿನ ಲೋಪದಿಂದಾಗಿ ಹಲವು ಅಭ್ಯರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ನಷ್ಟವಾಗಿತ್ತು. ಅದನ್ನು ಸರಿದೂಗಿಸಲು ಆ ಅಭ್ಯರ್ಥಿಗಳಿಗೆ ‌ಕೃಪಾಂಕ ನೀಡಲಾಗಿತ್ತು ಎಂದು ತಿಳಿಸಿದ್ದಾರೆ. ‘ಈಗಷ್ಟೇ ಚುನಾವಣೆಯಲ್ಲಿ ಸೋತಿರುವ ವಿರೋಧ ಪಕ್ಷದವರು ಹೊಸ ಸಮಸ್ಯೆಯನ್ನು ಹುಡುಕುತ್ತಿದ್ದಾರೆ. ಸುಳ್ಳಿನ ಆಧಾರದ ಮೇಲೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರನ್ನು ದಾರಿ ತಪ್ಪಿಸುವುದು ಸರಿಯಲ್ಲ’ ಎಂದ ಅವರು ಹೇಳಿದ್ದಾರೆ. ಈ ವರ್ಷ ಅಗ್ರ ಶ್ರೇಯಾಂಕ ಪಡೆದವರ ಸಂಖ್ಯೆ ಮತ್ತು ಕಟ್‌ ಆಫ್‌ ಅಂಕಗಳ ಹೆಚ್ಚಳದ ಕುರಿತು ಕೇಳಿದ ಪ್ರಶ್ನೆಗೆ ‘ಎನ್‌ಸಿಇಆರ್‌ಟಿ ಸೂಚಿಸಿದಂತೆ ಈ ವರ್ಷ ನೀಟ್‌ ಪಠ್ಯಕ್ರಮವನ್ನು ಕಡಿಮೆ ಮಾಡಲಾಗಿತ್ತು. ಅಲ್ಲದೆ ಈ ಬಾರಿ ನಾವು ಪ್ರಶ್ನೆಗಳನ್ನು ರಾಜ್ಯ ಮಂಡಳಿಗಳ ಪಠ್ಯಕ್ರಮದ ಜತೆಗೂ ಜೋಡಿಸಿದ್ದೆವು. ಕಡಿಮೆ ಪಠ್ಯಕ್ರಮ ಮತ್ತು ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದ್ದರಿಂದ ಹೆಚ್ಚು ಅಂಕಗಳಿಸಿದವರ ಸಂಖ್ಯೆಯಲ್ಲಿ ಏರಿಕೆಯಾಗಿದೆ’ ಎಂದು ಉತ್ತರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.