ನವದೆಹಲಿ: ಶಿಕ್ಷಕರ ಹಾಗೂ ಶಿಕ್ಷಕೇತರರ ನೇಮಕಾತಿ ಹಗರಣದಲ್ಲಿ ಪಶ್ಚಿಮ ಬಂಗಾಳದ ಸರ್ಕಾರಿ ಅಧಿಕಾರಿಗಳ ಪಾತ್ರದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕಲ್ಕತ್ತ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ. ಆದರೆ, 25 ಸಾವಿರಕ್ಕೂ ಹೆಚ್ಚಿನ ಶಿಕ್ಷಕರ ಹಾಗೂ ಶಿಕ್ಷಕೇತರ ಹುದ್ದೆಗಳ ನೇಮಕಾತಿ ರದ್ದುಪಡಿಸಿದ ಕ್ರಮಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
25,753 ಶಿಕ್ಷಕರು ಹಾಗೂ ಶಿಕ್ಷಕೇತರರ ನೇಮಕಾತಿಯನ್ನು ಅಸಿಂಧುಗೊಳಿಸಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ, ಮನೋಜ್ ಮಿಶ್ರಾ ಅವರು ಇದ್ದ ತ್ರಿಸದಸ್ಯ ಪೀಠವು ನಡೆಸಿತು. ಅರ್ಜಿಯ ವಿಚಾರಣೆಯನ್ನು ಪೀಠವು ಮೇ 6ಕ್ಕೆ ಮುಂದೂಡಲಾಗಿದೆ.
ಸರಿಸುಮಾರು 25 ಸಾವಿರ ಮಂದಿಯ ಉದ್ಯೋಗವನ್ನು ಕಿತ್ತುಕೊಳ್ಳುವುದು ಗಂಭೀರ ವಿಚಾರ ಎಂದು ಹೇಳಿರುವ ತ್ರಿಸದಸ್ಯ ಪೀಠವು, ಲಭ್ಯ ಮಾಹಿತಿ ಆಧರಿಸಿ ಸಕ್ರಮ ಹಾಗೂ ಅಕ್ರಮ ನೇಮಕಾತಿಗಳನ್ನು ಪ್ರತ್ಯೇಕಿಸಲು ಸಾಧ್ಯವೇ, ಅಕ್ರಮದ ಲಾಭ ಪಡೆದವರು ಯಾರು ಎಂಬುದನ್ನು ಗುರುತಿಸಲು ಸಾಧ್ಯವೇ ಎಂದು ಪ್ರಶ್ನಿಸಿದೆ.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿರುವ ಅರ್ಜಿಯಲ್ಲಿ ಪಶ್ಚಿಮ ಬಂಗಾಳ ಸರ್ಕಾರವು, ನೇಮಕಾತಿಯನ್ನು ಸಕಾರಣ ಇಲ್ಲದೆಯೇ ರದ್ದುಪಡಿಸಲಾಗಿದೆ ಎಂದು ದೂರಿದೆ. ‘ಇಡೀ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸುವ ಪರಿಣಾಮವನ್ನು ಅರ್ಥಮಾಡಿಕೊಳ್ಳುವಲ್ಲಿ ಹೈಕೋರ್ಟ್ ಸೋತಿದೆ. ಇಂಥದ್ದೊಂದು ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ ಸರ್ಕಾರಕ್ಕೆ ಅವಕಾಶವನ್ನೇ ನೀಡದೆ ಶಿಕ್ಷಕ, ಶಿಕ್ಷಕೇತರರ ನೇಮಕಾತಿಯನ್ನು ಕೋರ್ಟ್ ರದ್ದುಪಡಿಸಿದೆ. ಇದರಿಂದಾಗಿ ಶಿಕ್ಷಣ ವ್ಯವಸ್ಥೆಯು ನಿಲುಗಡೆಯ ಹಂತಕ್ಕೆ ಬಂದಂತಾಗಿದೆ’ ಎಂದು ಸರ್ಕಾರ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.