ADVERTISEMENT

ಯುಟ್ಯೂಬರ್‌ ಶಂಕರ್‌ ವಿರುದ್ಧದ ಬಲವಂತದ ಕ್ರಮಗಳಿಗೆ ಸುಪ್ರೀಂ ಕೋರ್ಟ್ ತಡೆ

ಪಿಟಿಐ
Published 14 ಆಗಸ್ಟ್ 2024, 14:23 IST
Last Updated 14 ಆಗಸ್ಟ್ 2024, 14:23 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ತಮಿಳುನಾಡಿನ ಜನಪ್ರಿಯ ಯುಟ್ಯೂಬರ್ ಸವುಕ್ಕು ಶಂಕರ್‌ ವಿರುದ್ಧದ ಬಲವಂತದ ಕ್ರಮಗಳಿಗೆ ಸುಪ್ರೀಂ ಕೋರ್ಟ್‌ ಬುಧವಾರ ತಡೆ ನೀಡಿ ಆದೇಶಿಸಿದೆ.

ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಪೀಠವು, ‘ಶಂಕರ್‌ ವಿರುದ್ಧ ದಾಖಲಾಗಿರುವ ಎಲ್ಲ 16 ಎಫ್‌ಐಆರ್‌ಗಳಿಗೆ ಸಂಬಂಧಿಸಿ, ಅವರ ವಿರುದ್ಧದ ಕ್ರಮಗಳಿಗೆ ತಡೆ ನೀಡಲಾಗಿದೆ’ ಎಂದು ಹೇಳಿದೆ.

ಪ್ರಕರಣಕ್ಕೆ ಸಂಬಂಧಿಸಿ ಹೊಸದಾಗಿ ಸಲ್ಲಿಸುವ ಅರ್ಜಿಯ ವಿಚಾರಣೆಗೆ ಒಪ್ಪಿಗೆ ನೀಡಿದ ಪೀಠ, ಎಲ್ಲ ಎಫ್‌ಐಆರ್‌ಗಳನ್ನು ಸಲ್ಲಿಸುವಂತೆ ಸೂಚಿಸಿದೆ.

ADVERTISEMENT

ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಮನೋಜ್‌ ಮಿಶ್ರಾ ಅವರೂ ಈ ಪೀಠದಲ್ಲಿದ್ದರು.

48 ವರ್ಷದ ಶಂಕರ್‌, ‘ರೆಡ್‌ಪಿಕ್ಸ್24X7’ ಎಂಬ ಯುಟ್ಯೂಬ್‌ ಚಾನೆಲ್‌ ನಡೆಸುತ್ತಿದ್ದಾರೆ. ಏಪ್ರಿಲ್‌ 30ರಂದು ಪ್ರಸಾರವಾದ ಸಂದರ್ಶನವೊಂದರಲ್ಲಿ ಮಹಿಳಾ ಕಾನ್‌ಸ್ಟೆಬಲ್ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದಡಿ ಕೊಯಮತ್ತೂರು ಠಾಣೆ ಪೊಲೀಸರು ಶಂಕರ್ ಅವರನ್ನು ಮೇ 4ರಂದು ಥೇಣಿಯಲ್ಲಿ ಬಂಧಿಸಿದ್ದರು.

ಗಾಂಜಾ ಸಂಗ್ರಹಿಸಿದ್ದ ಆರೋಪದಡಿಯೂ ಶಂಕರ್‌ ವಿರುದ್ಧ ಥೇಣಿ ಪೊಲೀಸರು ಎಫ್ಐಆರ್‌ ದಾಖಲಿಸಿದ್ದರು. ಹೀಗಾಗಿ, ಶಂಕರ್‌ ವಿರುದ್ಧ ಒಟ್ಟು 16 ಎಫ್‌ಐಆರ್‌ ದಾಖಲಾಗಿವೆ.

ಶಂಕರ್ ವಿರುದ್ಧ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಚೆನ್ನೈ ನಗರ ಪೊಲೀಸ್‌ ಆಯುಕ್ತರು ಹೊರಡಿಸಿದ್ದ ಆದೇಶವನ್ನು ಮದ್ರಾಸ್‌ ಹೈಕೋರ್ಟ್‌ ಆಗಸ್ಟ್‌ 9ರಂದು ರದ್ದುಪಡಿಸಿತ್ತು. 

ಮದ್ರಾಸ್‌ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶಗಳಂತೆ, ಶಂಕರ್‌ ಅವರನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, ಥೇಣಿ ಪೊಲೀಸರು ಅವರನ್ನು ಸೋಮವಾರ ಮತ್ತೆ ಬಂಧಿಸಿದ್ದರು.

ಶಂಕರ್‌ ಅವರು ತಮಿಳುನಾಡಿನ ಜಾಗೃತ ಮತ್ತು ಭ್ರಷ್ಟಾಚಾರ ವಿರೋಧಿ ನಿರ್ದೇಶನಾಲಯದಲ್ಲಿ ವಿಶೇಷ ಸಹಾಯಕರಾಗಿದ್ದರು. ನಿರ್ದೇಶನಾಲಯದ ಅಧಿಕಾರಿಗಳ ನಡುವಿನ ಸೂಕ್ಷ್ಮ ಸಂಭಾಷಣೆಗಳನ್ನು ಸೋರಿಕೆ ಮಾಡಿದ ಆರೋಪದಡಿ 2008ರಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ನ್ಯಾಯಾಲಯ ಅವರನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಿತ್ತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.