ADVERTISEMENT

ಅದಾನಿ ಸಮೂಹದಿಂದ ಭೂಮಿ ವಾಪಸ್‌: ಹೈಕೋರ್ಟ್‌ ಆದೇಶಕ್ಕೆ ‘ಸುಪ್ರೀಂ’ ತಡೆ

ಅದಾನಿ ಸಮೂಹಕ್ಕೆ ನೀಡಿದ್ದ ಭೂಮಿ ಮರಳಿ ಪಡೆಯಲು ಆದೇಶಿಸಿದ್ದ ಹೈಕೋರ್ಟ್‌

ಪಿಟಿಐ
Published 10 ಜುಲೈ 2024, 18:39 IST
Last Updated 10 ಜುಲೈ 2024, 18:39 IST
<div class="paragraphs"><p>ಹೈಕೋರ್ಟ್ ತಡೆ</p></div>

ಹೈಕೋರ್ಟ್ ತಡೆ

   

ನವದೆಹಲಿ: ಗುಜರಾತ್‌ನ ಮುಂದ್ರಾ ಬಂದರು ಬಳಿ ಅದಾನಿ ಸಮೂಹಕ್ಕೆ ನೀಡಿದ್ದ 266 ಎಕರೆ ಗೋಮಾಳವನ್ನು ಮರಳಿ ಪಡೆಯಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದ ಗುಜರಾತ್‌ ಹೈಕೋರ್ಟ್‌ನ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಬುಧವಾರ ತಡೆ ನೀಡಿದೆ.

‘ಗುಜರಾತ್‌ ಹೈಕೋರ್ಟ್‌ ನೀಡಿರುವ ಆದೇಶವು ಸೂಕ್ತವಾಗಿಲ್ಲ. ನಮಗೆ ಅನ್ಯಾಯವಾಗಿದೆ. ನ್ಯಾಯದಾನ ಮಾಡ ಬೇಕು ಎನ್ನುವುದಾದರೆ ಆ ಆದೇಶಕ್ಕೆ ತಡೆ ನೀಡಬೇಕು’ ಎಂದು ಅದಾನಿ ಪೋರ್ಟ್ಸ್‌ ಆ್ಯಂಡ್‌ ಸ್ಪೆಷಲ್‌ ಎಕನಾಮಿಕ್‌ ಜೋನ್‌ ಲಿ. (ಎಪಿಎಸ್‌ಇಜೆಡ್‌) ಕಂಪನಿಯು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ಮನವಿಯನ್ನು ಪುರಸ್ಕರಿಸಿ ನ್ಯಾಯಮೂರ್ತಿ ಗಳಾದ ಬಿ.ಆರ್‌. ಗವಾಯಿ ಮತ್ತು ಕೆ.ವಿ. ವಿಶ್ವನಾಥ ಅವರು, ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿದ್ದಾರೆ.

ADVERTISEMENT

ಕಛ್‌ ಜಿಲ್ಲೆಯ ನಾವಿನಲ್‌ ಗ್ರಾಮದ ಜನರು, ಗೋಮಾಳವನ್ನು ಅದಾನಿ ಸಮೂಹಕ್ಕೆ ನೀಡಿದ್ದರ ವಿರುದ್ಧ ಗುಜರಾತ್‌ ಹೈಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಿದ್ದರು. 2005ರಲ್ಲಿ ಈ ಗ್ರಾಮದ 231 ಎಕರೆ ಗೋಮಾಳವನ್ನು ಸರ್ಕಾರವು ಅದಾನಿ ಸಮೂಹಕ್ಕೆ ನೀಡಿತ್ತು. ಆ ಗ್ರಾಮದಲ್ಲಿ ಒಟ್ಟು 276 ಎಕರೆ ಗೋಮಾಳ ಇತ್ತು. ಅದಾನಿ ಸಮೂಹಕ್ಕೆ 231 ಎಕರೆ ನೀಡಿದ್ದರಿಂದ, ಗ್ರಾಮಸ್ಥರಿಗೆ ಈಗ 45 ಎಕರೆ ಗೋಮಾಳ ಅಷ್ಟೇ ಉಳಿದಂತಾಗಿದೆ.

ಗ್ರಾಮದಿಂದ ಏಳು ಕೀ.ಮೀ ದೂರದ ಪ್ರದೇಶದಲ್ಲಿ ಗೋಮಾಳ ನೀಡುವುದಾಗಿ ಸರ್ಕಾರ 2015ರಲ್ಲಿ ಹೇಳಿತ್ತು. ಆದರೆ, ಸರ್ಕಾರದ ಈ ಕ್ರಮವನ್ನು ಗ್ರಾಮಸ್ಥರು ವಿರೋಧಿಸಿದ್ದರು.

ಸಲಿಂಗ ವಿವಾಹ: ವಿಚಾರಣೆಯಿಂದ ಹಿಂದೆಸರಿದ ನ್ಯಾಯಮೂರ್ತಿ ಖನ್ನಾ

ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಲು ನಿರಾಕರಿಸಿರುವ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯಿಂದ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ಅವರು ಹಿಂದೆಸರಿದಿದ್ದಾರೆ. ಈ ಕಾರಣದಿಂದಾಗಿ ಮರುಪರಿಶೀಲನೆ ಅರ್ಜಿಗಳ ಪರಿಶೀಲನೆಯನ್ನು ಸುಪ್ರೀಂ ಕೋರ್ಟ್‌ ಬುಧವಾರ ಮುಂದೂಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರನ್ನು ಒಳಗೊಂಡ ಐವರು ನ್ಯಾಯಮೂರ್ತಿಗಳ ಪೀಠವು ಮರುಪರಿಶೀಲನಾ ಅರ್ಜಿಗಳ ಪರಿಶೀಲನೆಯನ್ನು ಬುಧವಾರ ಕೈಗೊಳ್ಳಬೇಕಿತ್ತು. ಖನ್ನಾ ಅವರು ವಿಚಾರಣೆಯಿಂದ ಹಿಂದೆಸರಿದ ಕಾರಣ, ಸಿಜೆಐ ಚಂದ್ರಚೂಡ್‌ ಅವರು ಈಗ ಮತ್ತೊಮ್ಮೆ ಐವರು ನ್ಯಾಯಮೂರ್ತಿಗಳ ಪೀಠವನ್ನು ರಚಿಸಬೇಕಾಗಿದೆ.

‘ವೈಯಕ್ತಿಕ ಕಾರಣಗಳಿಂದ ನ್ಯಾಯಮೂರ್ತಿ ಖನ್ನಾ ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ’ ಎಂದು ಮೂಲಗಳು ಹೇಳಿವೆ. ಮರುಪರಿಶೀಲನೆ ಅರ್ಜಿಗಳ ವಿಚಾರಣೆಗಾಗಿ
ರಚಿಸಲಾಗಿದ್ದ ಐವರು ನ್ಯಾಯಮೂರ್ತಿಗಳ ಪೀಠದಲ್ಲಿ, ಸಿಜೆಐ ಡಿ.ವೈ. ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ,
ಹಿಮಾ ಕೊಹ್ಲಿ, ಬಿ.ವಿ. ನಾಗರತ್ನಾ ಹಾಗೂ ಪಿ.ಎಸ್‌. ನರಸಿಂಹ ಅವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.