ನವದೆಹಲಿ: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಕರ್ನಾಟಕದ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರ ವಿರುದ್ಧ ಸಿಬಿಐ ದಾಖಲಿಸಿದ್ದ ಎಫ್‌ಐಆರ್ ಮತ್ತು ಆರೋಪಪಟ್ಟಿಯನ್ನು ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.
ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಆರ್. ಸುಭಾಷ್ ರೆಡ್ಡಿ ಅವರಿದ್ದ ಪೀಠವುಹೈಕೋರ್ಟ್2021ರ ಮಾರ್ಚ್ 19ರಂದು ನೀಡಿದ್ದ ಆದೇಶವನ್ನು ಅಮಾನತಿನಲ್ಲಿ ಇರಿಸಿತು.
ನಿಂಬಾಳ್ಕರ್ ಅವರ ವಿರುದ್ಧದ ಎಫ್‌ಐಆರ್ ರದ್ದತಿಯನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಪ್ರತಿಕ್ರಿಯೆ ಸಲ್ಲಿಸುವಂತೆ ನಿಂಬಾಳ್ಕರ್ ಅವರಿಗೆ ಸೂಚಿಸಿದೆ.
ಸಿಐಡಿಯ ಐಜಿಪಿಯಾಗಿದ್ದ ನಿಂಬಾಳ್ಕರ್ ಅವರು ಇ.ಬಿ. ಶ್ರೀಧರ ಅವರು ಸಿದ್ಧಪಡಿಸಿದ್ದ ವರದಿಯನ್ನು ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ 2019ರ ಜನವರಿ 18ರಂದು ಸಲ್ಲಿಸಿದ್ದರು. ಐಎಂಎ ಸಮೂಹವು ಯಾವುದೇ ತಪ್ಪು ಎಸಗಿರುವುದು ತನಿಖೆಯಲ್ಲಿ ಪತ್ತೆಯಾಗಿಲ್ಲ ಎಂದು ತಿಳಿಸಿದ್ದರು. ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಕಾಯ್ದೆ 2004ರ ಅನ್ವಯ ಐಎಂಎ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯ ಇಲ್ಲ ಎಂದಿದ್ದರು ಎಂದು ಹೇಳಲಾಗಿದೆ.
ಐಎಂಎ ಸಂಗ್ರಹಿಸಿದ ಠೇವಣಿಗೆ ಈ ಕಾಯ್ದೆಯಿಂದ ವಿನಾಯಿತಿ ಇದೆ ಎಂದು ನಿಂಬಾಳ್ಕರ್ ಹೇಳಿದ್ದರು. ಜತೆಗೆ, ಮುಖ್ಯ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್ ಮಾಲೀಕತ್ವದ ಕಂಪನಿಯು ಸಂಗ್ರಹಿಸಿದ್ದ ಠೇವಣಿಯ ವಿಷಯವನ್ನು ಉಲ್ಲೇಖಿಸಿರಲಿಲ್ಲ ಎಂದುಹೇಳಲಾಗಿದೆ.
ಅನಧಿಕೃತ ಠೇವಣಿಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆರ್‌ಬಿಐ ಸೂಚಿಸಿತ್ತು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ನಿಂಬಾಳ್ಕರ್, ಐಎಂಎ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸುವ ಅಗತ್ಯ ಇಲ್ಲ ಎಂದು ವರದಿ ಸಲ್ಲಿಸಿದ್ದರು ಎಂದು ಆರೋಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.