ನವದೆಹಲಿ: 69,000 ಸಹ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಹೊಸದಾಗಿ ಆಯ್ಕೆ ಪಟ್ಟಿ ಸಿದ್ಧಪಡಿಸುವಂತೆ ಅಲಹಾಬಾದ್ ಹೈಕೋರ್ಟ್, ಉತ್ತರ ಪ್ರದೇಶ ಸರ್ಕಾರಕ್ಕೆ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.
2020ರ ಜೂನ್ ಮತ್ತು 2022ರ ಜನವರಿಯಲ್ಲಿ ರಾಜ್ಯ ಸರ್ಕಾರ ಮಾಡಿದ್ದ 6,800 ಸಹ ಶಿಕ್ಷಕರ ಆಯ್ಕೆ ಪಟ್ಟಿಗಳನ್ನು ರದ್ದುಗೊಳಿಸಿದ್ದ ಹೈಕೋರ್ಟ್ ತೀರ್ಪಿಗೂ ಸಹ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ರವಿ ಕುಮಾರ್ ಸಕ್ಸೇನಾ ಮತ್ತು ಇತರೆ 51 ಮಂದಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠವು, ಉತ್ತರ ಪ್ರದೇಶ ಸರ್ಕಾರದ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಸೇರಿದಂತೆ ಇತರರಿಗೆ ನೋಟಿಸ್ ನೀಡಿದೆ.
ಈ ವಿಷಯದಲ್ಲಿ ಸೆ.23ರಿಂದ ಅಂತಿಮ ವಿಚಾರಣೆಯನ್ನು ನಡೆಸುವುದಾಗಿ ಹೇಳಿರುವ ನ್ಯಾಯಾಲಯವು, ಏಳು ಪುಟಗಳನ್ನು ಮೀರದ ಸಣ್ಣ ಟಿಪ್ಪಣಿಗಳನ್ನು ಸಲ್ಲಿಸಲು ಪ್ರಕರಣದ ಎಲ್ಲಾ ಕಕ್ಷಿದಾರರ ವಕೀಲರಿಗೆ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.