ನವದೆಹಲಿ: ಭಾಷಾಂತರ ತಪ್ಪಾಗಿರುವ ಕಾರಣ ತಮಿಳು ಭಾಷೆಯಲ್ಲಿ ನೀಟ್ ಬರೆದ ವಿದ್ಯಾರ್ಥಿಗಳಿಗೆ 196 ಕೃಪಾಂಕಗಳನ್ನು ನೀಡಬೇಕು ಎಂಬ ಮದ್ರಾಸ್ ಹೈಕೋರ್ಟ್‌ನ ಮದುರೆ ಪೀಠದ ಆದೇಶಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ ತಡೆ ನೀಡಿದೆ.
ಮದ್ರಾಸ್ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಿಬಿಎಸ್‌ಇ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ನ್ಯಾಯಮೂರ್ತಿಗಳಾದ ಎಸ್.ಎ.ಬೊಬ್ಡೆ ಹಾಗೂ ಎಲ್.ನಾಗೇಶ್ವರರಾವ್ ಅವರನ್ನು ಒಳಗೊಂಡ ಪೀಠ ಈ ತಡೆಯಾಜ್ಞೆ ನೀಡಿದೆ.
‘ಅಂಕಗಳನ್ನು ಈ ರೀತಿ ದಾನವಾಗಿ ನೀಡಲಾಗುವುದಿಲ್ಲ. ಈ ಸಮಸ್ಯೆಗೆ ಕಕ್ಷಿದಾರರು ಪರಿಹಾರವೊಂದನ್ನು ಕಂಡುಕೊಂಡು ಬನ್ನಿ’ ಎಂದು ಸಲಹೆ ನೀಡಿದ ಪೀಠ, ವಿಚಾರಣೆಯನ್ನು ಎರಡು ವಾರಗಳ ಅವಧಿಗೆ ಮುಂದೂಡಿತು.
ತಮಿಳು ಭಾಷೆಯಲ್ಲಿ ತರ್ಜುಮೆ ಮಾಡುವಾಗ ತಪ್ಪುಗಳು ಉಳಿದುಕೊಂಡಿದ್ದ ಕಾರಣ ಕೃಪಾಂಕ ನೀಡುವಂತೆ ವಿದ್ಯಾರ್ಥಿಗಳು ಹೈಕೋರ್ಟ್‌ನ ಮದುರೆ ಪೀಠದ ಮೊರೆ ಹೋಗಿದ್ದರು. ಭಾಷಾಂತರದಲ್ಲಿ ತಪ್ಪು ಇದ್ದ ಕಾರಣ ಪ್ರತಿ ಪ್ರಶ್ನೆಗೆ 4 ಅಂಕಗಳಂತೆ 49 ಪ್ರಶ್ನೆಗಳಿಗೆ ಒಟ್ಟು 196 ಕೃಪಾಂಕ ನೀಡುವಂತೆ ಪೀಠವು ಜುಲೈ 10ರಂದು ಸಿಬಿಎಸ್‌ಇಗೆ ಆದೇಶಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.