ADVERTISEMENT

‘ಕಾವಡ್‌ ಯಾತ್ರೆ’ಯಲ್ಲಿ ಹೆಸರು ಪ್ರದರ್ಶನ: ಸುಪ್ರೀಂ ಕೋರ್ಟ್ ತಡೆ

ಪಿಟಿಐ
Published 22 ಜುಲೈ 2024, 15:52 IST
Last Updated 22 ಜುಲೈ 2024, 15:52 IST
ಉತ್ತರ ಪ್ರದೇಶದ ಮುಜಫ್ಪರ್‌ನಗರದಲ್ಲಿ ಅಂಗಡಿ ಮಾಲೀಕರ ಹೆಸರು ಪ್ರದರ್ಶಿಸಿರುವ ಅಂಗಡಿಯ ಬಳಿಯಿಂದ ಸಾಗಿದ ಕಾವಡ್‌ ಯಾತ್ರಿಕರು –ಪಿಟಿಐ ಸಂಗ್ರಹ ಚಿತ್ರ
ಉತ್ತರ ಪ್ರದೇಶದ ಮುಜಫ್ಪರ್‌ನಗರದಲ್ಲಿ ಅಂಗಡಿ ಮಾಲೀಕರ ಹೆಸರು ಪ್ರದರ್ಶಿಸಿರುವ ಅಂಗಡಿಯ ಬಳಿಯಿಂದ ಸಾಗಿದ ಕಾವಡ್‌ ಯಾತ್ರಿಕರು –ಪಿಟಿಐ ಸಂಗ್ರಹ ಚಿತ್ರ   

ನವದೆಹಲಿ: ‘ಕಾವಡ್‌ ಯಾತ್ರೆ’ಯ ಮಾರ್ಗಗಳಲ್ಲಿರುವ ತಿಂಡಿ–ತಿನಿಸುಗಳ ಮಳಿಗೆಗಳ ಮಾಲೀಕರು ತಮ್ಮ ಹೆಸರು ಮತ್ತು ಇತರ ವಿವರಗಳನ್ನು ಮಳಿಗೆಗಳ ಮುಂದೆ ಪ್ರದರ್ಶಿಸುವಂತೆ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಹೊರಡಿಸಿದ್ದ ನಿರ್ದೇಶನಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯಪ್ರದೇಶ ಸರ್ಕಾರಗಳಿಗೆ ನೋಟಿಸಿ ಜಾರಿಗೊಳಿಸಿರುವ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್‌ ಮತ್ತು ಎಸ್‌ವಿಎನ್‌ ಭಟ್ಟಿ ಅವರಿದ್ದ ಪೀಠ, ‘ಆದಾಗ್ಯೂ, ಮಳಿಗೆಗಳು ತಮ್ಮಲ್ಲಿನ ತಿಂಡಿಗಳು ಸಸ್ಯಾಹಾರಿ ಅಥವಾ ಮಾಂಸಾಹಾರಿ ಎಂಬುದನ್ನು ತಿಳಿಯಲು ಹೆಸರು ಪ್ರದರ್ಶಿಸುವ ಅಗತ್ಯವಿದೆ’ ಎಂದು ಹೇಳಿತು.

ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿನ ಅಂಗಡಿಗಳ ಮುಂದೆ ಮಾಲೀಕರ ಹೆಸರು, ಮೊಬೈಲ್‌ ಸಂಖ್ಯೆಯನ್ನು ಪ್ರದರ್ಶಿಸಬೇಕು ಎಂದು ಅಲ್ಲಿನ ಮಹಾನಗರ ಪಾಲಿಕೆ ಆದೇಶಿಸಿತ್ತು. ಇದರಿಂದ ಮಧ್ಯ ಪ್ರದೇಶ ಸರ್ಕಾರಕ್ಕೂ ನೋಟಿಸ್‌ ಜಾರಿಗೊಳಿಸಿದೆ.

ADVERTISEMENT

ಉತ್ತರ ಪ್ರದೇಶ ಸರ್ಕಾರದ ನಿರ್ದೇಶನಕ್ಕೆ ವಿಪಕ್ಷಗಳು ಹಾಗೂ ಆಡಳಿತಾರೂಢ ಮೈತ್ರಿಕೂಟದ ಅಂಗಪಕ್ಷವಾಗಿರುವ ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ಆಕ್ಷೇಪ ವ್ಯಕ್ತಪಡಿಸಿದ್ದವು. ಇದು ‘ಧಾರ್ಮಿಕ ತಾರತಮ್ಯ’ವನ್ನು ಉತ್ತೇಜಿಸುತ್ತದೆ ಎಂದು ಆರೋಪಿಸಿದ್ದವು. ಇದರ ಬೆನ್ನಲ್ಲೇ, ಸುಪ್ರೀಂ ಕೋರ್ಟ್‌ನ ಆದೇಶ ಹೊರಬಿದ್ದಿದೆ.

‘ಇಂತಹ ನಿರ್ದೇಶನಗಳ ಜಾರಿಗೆ ತಡೆ ನೀಡುವ ಮಧ್ಯಂತರ ಆದೇಶ ಹೊರಡಿಸುವುದು ಸೂಕ್ತವೆಂದು ನಾವು ಪರಿಗಣಿಸುತ್ತೇವೆ. ತಿಂಡಿ ತಿನಿಸುಗಳ ಮಾರಾಟಗಾರರು ಆಹಾರದ ಹೆಸರನ್ನು ಪ್ರದರ್ಶಿಸಬೇಕಾಗಬಹುದು. ಆದರೆ ಮಾಲೀಕರು ಮತ್ತು ಸಿಬ್ಬಂದಿಯ ಹೆಸರನ್ನು ಪ್ರದರ್ಶಿಸುವಂತೆ ಒತ್ತಾಯಿಸಬಾರದು’ ಎಂದು ಹೇಳಿದ ಪೀಠ ಮುಂದಿನ ವಿಚಾರಣೆಯನ್ನು ಶುಕ್ರವಾರಕ್ಕೆ ನಿಗದಿಪಡಿಸಿತು.

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಪ್ರಾಧ್ಯಾಪಕ ಅಪೂರ್ವಾನಂದ ಝಾ ಮತ್ತು ಅಂಕಣಕಾರ ಆಕಾರ್‌ ಪಟೇಲ್‌ ಅಲ್ಲದೆ ಅಸೋಸಿಯೇಷನ್‌ ಆಫ್‌ ಪ್ರೊಟೆಕ್ಷನ್ ಆಫ್‌ ಸಿವಿಲ್ ರೈಟ್ಸ್ ಸ್ವಯಂ ಸೇವಾ ಸಂಸ್ಥೆಯು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಪೀಠವು ನಡೆಸಿತು. ಸೋಮವಾರ ನಡೆದ ವಿಚಾರಣೆ ವೇಳೆ ರಾಜ್ಯ ಸರ್ಕಾರಗಳ ಪರ ಯಾರೂ ಹಾಜರಿರಲಿಲ್ಲ.

ಹೆಸರು ಪ್ರದರ್ಶಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರವು ಅಧಿಕೃತ ಆದೇಶ ಹೊರಡಿಸಿದೆಯೇ ಎಂದು ಪೀಠವು, ಮಹುವಾ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ ಅವರನ್ನು ಕೇಳಿತು. ಅದಕ್ಕೆ ಸಿಂಘ್ವಿ, ‘ಅಸ್ಪಷ್ಟವಾದ’ ಆದೇಶ ಹೊರಡಿಸಲಾಗಿದೆ ಎಂದರು.

ಪ್ರಮುಖ ಅಂಶಗಳು

* ಉತ್ತರ ಪ್ರದೇಶ ಉತ್ತರಾಖಂಡ ಮತ್ತು ಮಧ್ಯಪ್ರದೇಶ ಸರ್ಕಾರಗಳಿಗೆ ನೋಟಿಸ್ ಜಾರಿಗೊಳಿಸಿದ ಸುಪ್ರೀಂ ಕೋರ್ಟ್ * ಕಾವಡ್‌ ಯಾತ್ರಿಕರು ಶಿವನನ್ನು ಪೂಜಿಸುತ್ತಾರೆ ಅಲ್ಲವೇ ಆಹಾರವನ್ನು ಒಂದು ನಿರ್ದಿಷ್ಟ ಸಮುದಾಯದವರು ಬೆಳೆಯಬೇಕು ತಯಾರಿಸಬೇಕು ಮತ್ತು ಬಡಿಸಬೇಕೆಂದು ಯಾತ್ರಿಕರು ಬಯಸುವರೇ: ಪೀಠ ಪ್ರಶ್ನೆ * ಹಿಂದೂಗಳು ನಡೆಸುತ್ತಿರುವ ಅನೇಕ ಸಸ್ಯಾಹಾರಿ ಹೋಟೆಲ್‌ಗಳು ಮತ್ತು ರೆಸ್ಟೊರೆಂಟ್‌ಗಳಲ್ಲಿ ಮುಸ್ಲಿಂ ಹಾಗೂ ದಲಿತ ನೌಕರರು ಇದ್ದಾರೆ. ಇಂತಹ ನಿರ್ದೇಶನಗಳನ್ನು ನೀಡಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ: ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ

‘ಹೆಸರು ಪ್ರದರ್ಶನ ಕಡ್ಡಾಯ ಅಲ್ಲ’

ಭೋಪಾಲ್: ರಾಜ್ಯದಲ್ಲಿ ಕಾವಡ್‌ ಯಾತ್ರೆಯ ಮಾರ್ಗದಲ್ಲಿ ಅಂಗಡಿ ಮಾಲೀಕರು ತಮ್ಮ ಹೆಸರನ್ನು ಪ್ರದರ್ಶಿಸಬೇಕೆಂಬ ಸೂಚನೆ ನೀಡಿಲ್ಲ ಎಂದು ಮಧ್ಯಪ್ರದೇಶ ಸರ್ಕಾರ ಸ್ಪಷ್ಟಪಡಿಸಿದೆ. ‘ಹೆಸರು ಪ್ರದರ್ಶಿಸುವಂತೆ ಸರ್ಕಾರದ ಮಟ್ಟದಲ್ಲಿ ಯಾವುದೇ ನಿರ್ದೇಶನ ಹೊರಡಿಸಿಲ್ಲ’ ಎಂದು ನಗರಾಭಿವೃದ್ಧಿ ಮತ್ತು ವಸತಿ ಇಲಾಖೆ ಭಾನುವಾರ ರಾತ್ರಿ ಪ್ರಕಟಣೆಯಲ್ಲಿ ತಿಳಿಸಿದೆ. ಇದಕ್ಕೆ ಸಂಬಂಧಿಸಿದಂತೆ ಗೊಂದಲ ಉಂಟುಮಾಡಬೇಡಿ ಎಂದು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಿದೆ.  ‘ಮಧ್ಯಪ್ರದೇಶದ ಹೊರಾಂಗಣ ಜಾಹೀರಾತು ನಿಯಮಗಳು– 2017ರ ಅಡಿಯಲ್ಲಿ ಅಂಗಡಿಗಳ ಮುಂದೆ ಬೋರ್ಡ್‌ಗಳನ್ನು ಹಾಕಬಹುದು. ಈ ಬೋರ್ಡ್‌ಗಳಲ್ಲಿ ಅಂಗಡಿ ಮಾಲೀಕರ ಹೆಸರನ್ನು ಪ್ರದರ್ಶಿಸುವುದು ಕಡ್ಡಾಯ ಅಲ್ಲ’ ಎಂದು ಹೇಳಿದೆ. 

‘ಮುಸ್ಲಿಂ ವ್ಯಕ್ತಿಯ ಹೋಟೆಲ್‌ಗೆ ಹೋಗುತ್ತಿದ್ದೆ’

ಹೋಟೆಲ್‌ಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂಬುದನ್ನು ಒತ್ತಿ ಹೇಳಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಸ್‌ವಿಎನ್‌ ಭಟ್ಟಿ ‘ಕೇರಳದಲ್ಲಿದ್ದಾಗ ನಾನು ಮುಸ್ಲಿಂ ವ್ಯಕ್ತಿ ನಡೆಸುತ್ತಿದ್ದ ಸಸ್ಯಾಹಾರಿ ಹೋಟೆಲ್‌ಗೆ ಆಗಿಂದಾಗ್ಗೆ ಭೇಟಿ ಕೊಡುತ್ತಿದ್ದೆ’ ಎಂಬುದನ್ನು ನೆನಪಿಸಿಕೊಂಡರು. ‘ಕೇರಳದಲ್ಲಿ ನ್ಯಾಯಮೂರ್ತಿಯಾಗಿ ಇದ್ದಾಗ ನನ್ನ ಒಂದು ಅನುಭವವನ್ನು ಹೇಳುತ್ತೇನೆ. ಆ ಊರಿನ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಆ ಊರಿನಲ್ಲಿ ಹಿಂದೂ ವ್ಯಕ್ತಿ ನಡೆಸುತ್ತಿದ್ದ ಸಸ್ಯಾಹಾರಿ ಹೋಟೆಲ್‌ ಹಾಗೂ ಮುಸ್ಲಿಂ ವ್ಯಕ್ತಿ ನಡೆಸುತ್ತಿದ್ದ ಸಸ್ಯಾಹಾರಿ ಹೋಟೆಲ್‌ ಇವೆ. ಸಸ್ಯಾಹಾರಕ್ಕಾಗಿ ನಾನು ಮುಸ್ಲಿಂ ವ್ಯಕ್ತಿ ನಡೆಸುತ್ತಿದ್ದ ಹೋಟೆಲ್‌ಗೆ ಹೋಗುತ್ತಿದ್ದೆ. ದುಬೈನಿಂದ ವಾಪಸಾಗಿ ಹೋಟೆಲ್‌ ಉದ್ಯಮ ಆರಂಭಿಸಿದ್ದ ಅವರು ಆಹಾರದ ಗುಣಮಟ್ಟ ಸುರಕ್ಷತೆ ಸ್ವಚ್ಛತೆ ಮತ್ತು ನೈರ್ಮಲ್ಯದ ವಿಚಾರದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಂಡಿದ್ದರು. ಆದ್ದರಿಂದ ಆ ಹೋಟೆಲ್‌ ನನ್ನ ಆಯ್ಕೆಯಾಗಿತ್ತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.