ADVERTISEMENT

ವಕೀಲೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ನ್ಯಾ. ಶ್ರೀಶಾನಂದ ವಿರುದ್ಧ SC ದೂರು ದಾಖಲು

ಪಿಟಿಐ
Published 20 ಸೆಪ್ಟೆಂಬರ್ 2024, 10:21 IST
Last Updated 20 ಸೆಪ್ಟೆಂಬರ್ 2024, 10:21 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ನ್ಯಾಯಾಲಯದ ಕಲಾಪವೊಂದರಲ್ಲಿ ವಕೀಲೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ವಿರುದ್ಧ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಒಳಗೊಂಡಂತೆ ಐವರು ಹಿರಿಯ ನ್ಯಾಯಮೂರ್ತಿಗಳು ಶುಕ್ರವಾರ ಬೆಳಿಗ್ಗೆ ಸಭೆ ನಡೆಸಿ ನ್ಯಾ. ಶ್ರೀಶಾನಂದ ಅವರು ಆಡಿರುವ ಮಾತುಗಳ ಬಗ್ಗೆ ಚರ್ಚಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಲು ನಿರ್ಧರಿಸಿದರು. ಈ ಕುರಿತಂತೆ ವರದಿ ಸಲ್ಲಿಸುವಂತೆ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್‌ ಹೇಳಿದೆ.

‘ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆದ ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ಅವರ ಹೇಳಿಕೆಯು ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಯಾಗಿದೆ. ಈ ಪ್ರಕರಣ ಕುರಿತ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರು ಸೂಚನೆ ಕೇಳಿದ ಬೆನ್ನಲ್ಲೇ, ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್‌ ಅನ್ನು ಕೋರಲಾಗಿದೆ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.

ADVERTISEMENT

‘ದೂರು ದಾಖಲಿಸುವ ಪ್ರಕ್ರಿಯೆಯು ಮುಂದಿನ ಎರಡು ದಿನಗಳವರೆಗೂ ನಡೆಯಲಿದೆ. ಸುಪ್ರೀಂ ಕೋರ್ಟ್‌ನ ಸೆಕ್ರೆಟರಿ ಜನಲರ್ ಅವರು ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ. ಇದರ ವಿಚಾರಣೆಯು ಮುಂದಿನ ಬುಧವಾರ ನಡೆಯಲಿದೆ’ ಎಂದು ನ್ಯಾ. ಚಂದ್ರಚೂಡ್ ತಿಳಿಸಿದರು.

‘ನಾವು ಕೆಲವೊಂದು ಮೂಲ ಮಾರ್ಗಸೂಚಿಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ’ ಎಂದು ವಿಚಾರಣೆ ನಡೆಸಿದ ಪೀಠದಲ್ಲಿದ್ದ ನ್ಯಾ. ಸಂಜೀವ್ ಖನ್ನಾ, ನ್ಯಾ. ಬಿ.ಆರ್. ಗವಾಯಿ, ನ್ಯಾ. ಸೂರ್ಯಕಾಂತ್ ಹಾಗೂ ನ್ಯಾ. ಹೃಷಿಕೇಶ್ ರಾಯ್‌ ಹೇಳಿದರು.

ಕರ್ನಾಟಕ ಹೈಕೋರ್ಟ್‌ನ ಈ ಪ್ರಕರಣ ಕುರಿತು ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ವಿಡಿಯೊ ಸಹಿತ ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದರು. ಜತೆಗೆ ನ್ಯಾಯಮೂರ್ತಿ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನು ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.