ADVERTISEMENT

ಕುರಾನ್‌ನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿ, ದಂಡ ವಿಧಿಸಿದ 'ಸುಪ್ರೀಂ'

ಅರ್ಜಿದಾರರಿಗೆ ₹50 ಸಾವಿರ ದಂಡ ವಿಧಿಸಿದ ನ್ಯಾಯಾಲಯ

ಪಿಟಿಐ
Published 12 ಏಪ್ರಿಲ್ 2021, 16:29 IST
Last Updated 12 ಏಪ್ರಿಲ್ 2021, 16:29 IST
ಪ್ರಾತಿನಿಧಿಕ ಚಿತ್ರ (ಎಎಫ್‌ಪಿ ಚಿತ್ರ)
ಪ್ರಾತಿನಿಧಿಕ ಚಿತ್ರ (ಎಎಫ್‌ಪಿ ಚಿತ್ರ)   

ನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನುತೆಗೆದುಹಾಕುವಂತೆ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್‌, ಅರ್ಜಿದಾರರಿಗೆ ₹50 ಸಾವಿರ ದಂಡ ವಿಧಿಸಿದೆ.

ಉತ್ತರ ಪ್ರದೇಶದ ಶಿಯಾ ವಕ್ಫ್‌ ಮಂಡಳಿಯ ಮಾಜಿ ಅಧ್ಯಕ್ಷ ವಾಸೀಮ್‌ ರಿಜ್ವಿ ಈ ಅರ್ಜಿ ಸಲ್ಲಿಸಿದ್ದರು. ‘ಈ ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ. ಇದೊಂದು ಕ್ಷುಲ್ಲಕ ವಿಷಯ’ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿಗಳಾದ ಆರ್‌.ಎಫ್‌. ನಾರಿಮನ್‌‌, ಬಿ.ಆರ್‌. ಗವಾಯಿ ಮತ್ತು ಹೃಷಿಕೇಶ್‌ ರಾಯ್‌ ಅವರನ್ನೊಳಗೊಂಡ ಪೀಠವು ಅರ್ಜಿಯನ್ನು ತಿರಸ್ಕರಿಸಿದೆ.

ADVERTISEMENT

‘26 ವಚನಗಳು ಭಯೋತ್ಪಾದನೆಗೆ ಉತ್ತೇಜನ ನೀಡುತ್ತವೆ. ಸಮಾನತೆ, ಕ್ಷಮಾದಾನ ಮತ್ತು ಸಹಿಷ್ಣುತೆಯೇ ಇಸ್ಲಾಂ ಧರ್ಮದ ಮೂಲ ಆಶಯಗಳು. ಆದರೆ, ಪವಿತ್ರ ಗಂಥದಲ್ಲಿನ ಈ ವಚನಗಳನ್ನು ವಿವಿಧ ರೀತಿಯಲ್ಲಿ ವಿಶ್ಲೇಷಿಸಲಾಗಿದೆ. ಇದರಿಂದ ಮೂಲ ಆಶಯದಿಂದ ಧರ್ಮವು ದೂರ ಸರಿಯುತ್ತಿದೆ’ ಎಂದು ರಿಜ್ವಿ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ರಿಜ್ವಿ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಹಲವು ಮುಸ್ಲಿಂ ಸಂಘಟನೆಗಳ ಪದಾಧಿಕಾರಿಗಳು ಮತ್ತು ಮೌಲ್ವಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಭಟನೆಗಳು ಸಹ ನಡೆದಿದ್ದವು.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಕಳೆದ ತಿಂಗಳು ರಿಜ್ವಿ ಅವರ ವಿರುದ್ಧ ಬರೇಲಿಯಲ್ಲಿ ಎಫ್‌ಐಆರ್‌ ಸಹ ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.