ADVERTISEMENT

ಬಿಹಾರ ಸೇತುವೆ ಕುಸಿತ ಕುರಿತ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು

ಪಿಟಿಐ
Published 4 ನವೆಂಬರ್ 2024, 15:53 IST
Last Updated 4 ನವೆಂಬರ್ 2024, 15:53 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಬಿಹಾರದಲ್ಲಿ ಹಲವು ಸೇತುವೆಗಳು ಏಕಾಏಕಿ ಕುಸಿದ ಬಗ್ಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್‌) ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸೋಮವಾರ ಒಪ್ಪಿಗೆ ಸೂಚಿಸಿದೆ.

ಅರ್ಜಿದಾರರ ಪರ ವಕೀಲ ಬ್ರಜೇಶ್‌ ಸಿಂಗ್‌, ಅರ್ಜಿಯ ವಿಚಾರಣೆಗೆ ನ್ಯಾಯಮೂರ್ತಿಗಳಿಗೆ ಸೋಮವಾರ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಚಂದ್ರಚೂಡ್‌ ಅವರು, ‘ಈ ಬಗ್ಗೆ ಪರಿಶೀಲಿಸಲಾಗುವುದು’ ಎಂದರು. ತಮ್ಮ ಕಚೇರಿಗೆ ಅರ್ಜಿ ಸಂಬಂಧ ಇ–ಮೇಲ್‌ ಕಳುಹಿಸಲಾಗಿದೆಯೇ ಎಂದು ಖಚಿತಪಡಿಸಿಕೊಂಡರು.

ಸಿಜೆಐ ಡಿ.ವೈ.ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್‌ ಮಿಶ್ರಾ ಅವರಿದ್ದ ಪೀಠವು ಈ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುವಂತೆ ಬಿಹಾರ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ಜುಲೈ 29ರಂದು ಸೂಚಿಸಿತ್ತು. ಬಿಹಾರದ ಲೋಕೋಪಯೋಗಿ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೂ ಈ ಬಗ್ಗೆ ಪ್ರತಿಕ್ರಿಯಿಸುವಂತೆ ಹೇಳಿತ್ತು.

ADVERTISEMENT

ಸೇತುವೆಗಳ ವಿನ್ಯಾಸ, ಸಾಮರ್ಥ್ಯ, ಸುರಕ್ಷತೆ ಹಾಗೂ ಬಾಳಿಕೆಯ ಬಗ್ಗೆ ಅಧ್ಯಯನ ಮಾಡಲು ತಜ್ಞರ ಸಮಿತಿಯನ್ನು ರಚಿಸಬೇಕು. ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ನಿರ್ದಿಷ್ಟ ಸೇತುವೆಗಳ ದುರಸ್ತಿ ಅಥವಾ ನೆಲಸಮ ಮಾಡಲು ಕ್ರಮಕೈಗೊಳ್ಳಬೇಕು. ಎನ್‌ಎಚ್‌ಎಐ ನಿಗದಿಪಡಿಸಿರುವ ಮಾನದಂಡಗಳನ್ನು ಸೇತುವೆಗಳು ಹೊಂದಿವೆಯೇ ಎಂಬುದರ ಮೇಲೆ ನಿಗಾ ಇಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಕೆಯಾಗಿತ್ತು.

ಬಿಹಾರದಲ್ಲಿ ಈ ವರ್ಷದ ಮಳೆಗಾಲದಲ್ಲಿ ಹತ್ತಕ್ಕೂ ಹೆಚ್ಚು ಸೇತುವೆಗಳು ಹಠಾತ್ತನೆ ಕುಸಿದಿದ್ದವು. ಈ ಘಟನೆಗಳು ಸೇತುವೆಗಳ ಸಾಮರ್ಥ್ಯದ ಬಗ್ಗೆ ಕಳವಳ ಸೃಷ್ಟಿಸಿದ್ದವು. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಎಲ್ಲ ಹಳೆಯ ಸೇತುವೆಗಳ ಸಮೀಕ್ಷೆ ನಡೆಸಿ, ತುರ್ತು ದುರಸ್ತಿ ಅಗತ್ಯವಿರುವ ಸೇತುವೆಗಳ ಪಟ್ಟಿ ಸಲ್ಲಿಸುವಂತೆ ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಸೂಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.