ADVERTISEMENT

ಕಾಮ್ರಾ ವಿರುದ್ಧ ನಿಂದನೆ ಪ್ರಕ್ರಿಯೆ: ಶುಕ್ರವಾರ ‘ಸುಪ್ರೀಂ’ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 15:10 IST
Last Updated 17 ಡಿಸೆಂಬರ್ 2020, 15:10 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಸುಪ್ರೀಂ ಕೋರ್ಟ್‌ ವಿರುದ್ಧ ಆಕ್ಷೇಪಾರ್ಹ ಟ್ವೀಟ್‌ ಮಾಡಿರುವ ಹಾಸ್ಯ ಕಲಾವಿದ ಕುನಾಲ್‌ ಕಾಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವ ಕುರಿತು ಶುಕ್ರವಾರ ತೀರ್ಮಾನ ಪ್ರಕಟಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ ಗುರುವಾರ ತಿಳಿಸಿದೆ.

ಕಾಮ್ರಾ ವಿರುದ್ಧ ದಾಖಲಾದ ವಿವಿಧ ಅರ್ಜಿಗಳ ವಿಚಾರಣೆ ಗುರುವಾರ ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ಅವರಿದ್ದ ಪೀಠದಲ್ಲಿ ನಡೆಯಿತು. ಅರ್ಜಿದಾರರೊಬ್ಬರ ಪರವಾಗಿ ವಾದಿಸಿದ ವಕೀಲ ನಿಶಾಂತ್‌ ಆರ್‌.ಕಟ್ನೇಶ್ವರ್‌ಕರ್‌, ‘ಈ ಎಲ್ಲ ಟ್ವೀಟ್‌ಗಳು ಅವಮಾನಕರವಾಗಿವೆ. ಇವರ ವಿರುದ್ಧ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಅಟಾರ್ನಿ ಜನರಲ್‌ಕೆ. ವೇಣುಗೋಪಾಲ್‌ ಅವರ ಒಪ್ಪಿಗೆ ಕೇಳಿದ್ದೆವು. ಅವರು ಸಮ್ಮತಿ ನೀಡಿದ್ದಾರೆ’ ಎಂದರು.

ಕಮ್ರಾ ಅವರು ಮಾಡಿರುವ ಟ್ವೀಟ್‌ಗಳನ್ನು ಓದುವುದು ಬೇಡ ಎಂದು ವಕೀಲರಿಗೆ ಸೂಚಿಸಿದ ಪೀಠವು, ‘ವೇಣುಗೋಪಾಲ್‌ ಅವರ ಪತ್ರವನ್ನು ನಾವೂ ಗಮನಿಸಿದ್ದೇವೆ’ ಎಂದು ಹೇಳಿತು.

ADVERTISEMENT

ರಿಪಬ್ಲಿಕ್ ಟಿವಿಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ಸುಪ್ರಿಂ ಕೋರ್ಟ್‌ ಜಾಮೀನು ನೀಡಿದ ಬಳಿಕ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಸೇರಿದಂತೆ ಸುಪ್ರೀಂಕೋರ್ಟ್ ಮತ್ತು ಅದರ ನ್ಯಾಯಮೂರ್ತಿಗಳ ವಿರುದ್ಧ ಕಾಮ್ರಾ ಟ್ವೀಟ್ ಮಾಡಿದ್ದರು.

‘ಕಾಮ್ರಾ ಅವರ ಟ್ವೀಟ್‌ಗಳು ಕೆಟ್ಟ ಅಭಿರುಚಿಯದ್ದಾಗಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ವೇಣುಗೋಪಾಲ್‌ ಅವರು, ‘ಈಗಿನ ಜನರು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸುಪ್ರೀಂಕೋರ್ಟ್ ಮತ್ತು ಅದರ ನ್ಯಾಯಾಧೀಶರನ್ನು ಧೈರ್ಯವಾಗಿ ಮತ್ತು ನಾಚಿಕೆ ಬಿಟ್ಟು ಖಂಡಿಸಬಹುದು ಎಂದು ನಂಬಿದ್ದಾರೆ. ಇದು ನ್ಯಾಯಾಲಯಗಳ ನಿಂದನೆ ಕಾಯ್ದೆ, 1972ರಡಿ ಶಿಕ್ಷಾರ್ಹ ಅಪರಾಧ ಎನ್ನುವುದನ್ನು ಜನರು ತಿಳಿಯಬೇಕಾಗಿದೆ’ ಎಂದಿದ್ದಾರೆ.

ಸುಪ್ರೀಂ ಕೋರ್ಟ್‌ ವಿರುದ್ಧ ಆಕ್ಷೇಪಾರ್ಹ ಟ್ವೀಟ್‌ ಮಾಡಿರುವ ವ್ಯಂಗ್ಯಚಿತ್ರ ಕಲಾವಿದೆ ರಚಿತಾ ತನೇಜ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವ ಕುರಿತು ಶುಕ್ರವಾರ ತೀರ್ಮಾನ ಪ್ರಕಟಿಸುವುದಾಗಿ ಸುಪ್ರೀಂ ಕೋರ್ಟ್‌ ಗುರುವಾರ ತಿಳಿಸಿದೆ.

ರಚಿತಾ ಅವರ ವಿರುದ್ಧ ಕಾನೂನು ವಿಷ್ಯಾರ್ಥಿ ಆದಿತ್ಯ ಕಶ್ಯಪ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ಅವರಿದ್ದ ಪೀಠವು ನಡೆಸಿತು. ನ್ಯಾಯಾಂಗ ನಿಂದನೆ ಪ್ರಕ್ರಿಯೆಗೂ ಅಟಾರ್ನಿ ಜನರಲ್‌ ಅವರು ಒಪ್ಪಿಗೆ ನೀಡಿದ್ದಾರೆ. ‘ರಚಿತಾ ಅವರ ಪ್ರತಿಯೊಂದು ಟ್ವೀಟ್‌ ಹಾಗೂ ಅದರ ಜೊತೆಗಿರುವ ವ್ಯಂಗ್ಯ ಚಿತ್ರಗಳು ಸುಪ್ರೀಂ ಕೋರ್ಟ್‌ ನಿಂದಿಸುತ್ತಿವೆ. ಹೀಗಾಗಿ ನಿಂದನೆ ಪ್ರಕರಣ ದಾಖಲಿಸಲು ಒಪ್ಪಿಗೆ ಸೂಚಿಸುತ್ತೇನೆ ಎಂದು ಪತ್ರದಲ್ಲಿ ವೇಣುಗೋಪಾಲ್‌ ತಿಳಿಸಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.