ನವದೆಹಲಿ: ಆಧಾರ್‌ನೊಂದಿಗೆ ಮತದಾರರ ಗುರುತಿನ ಪತ್ರ ಜೋಡಿಸುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ಸಮ್ಮತಿಸಿದೆ.
ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಅಭಯ್ ಎಸ್.ಓಕಾ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ಮಾಜಿ ಮೇಜರ್ ಜನರಲ್ ಎಸ್.ಜಿ.ವೊಂಬತ್ಕೆರೆ ಅವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಇತರ ಅರ್ಜಿಗಳ ಜೊತೆ ಅದನ್ನು ಸೇರ್ಪಡೆ ಮಾಡಿದೆ.
‘ಆಧಾರ್ ವಿಚಾರಕ್ಕೆ ಸಂಬಂಧಿಸಿದಂತೆ 2019ರಲ್ಲಿ ತೀರ್ಪು ನೀಡಿದ್ದ ನ್ಯಾಯಾಲಯವುಕೆಲ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ಆಧಾರ್ ಕಾರ್ಡ್ ಕಡ್ಡಾಯಗೊಳಿಸಬೇಕೇ ವಿನಃ ಅದನ್ನೇ ನೆಪವಾಗಿಟ್ಟುಕೊಂಡು ನಾಗರಿಕರ ಹಕ್ಕುಗಳನ್ನು ನಿರಾಕರಿಸುವಂತಿಲ್ಲ ಎಂದು ಹೇಳಿತ್ತು. ಇದನ್ನು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.ಇಂತಹ ಹಕ್ಕುಗಳ ಪೈಕಿ ಮತದಾನದ ಹಕ್ಕು ಅತ್ಯಂತ ಶ್ರೇಷ್ಠವಾದುದು ಎಂದೂ ಅರ್ಜಿಯಲ್ಲಿ ಹೇಳಿದ್ದಾರೆ’ ಎಂದು ನ್ಯಾಯಪೀಠ ತಿಳಿಸಿದೆ.
ಕೈದಿಗಳಿಗೆ ಮತದಾನದ ಹಕ್ಕು: ಕೇಂದ್ರದ ಅಭಿಪ್ರಾಯ ಕೇಳಿದ ‘ಸುಪ್ರೀಂ’:
ಕೈದಿಗಳಿಗೆ ಮತದಾನದ ಹಕ್ಕು ನಿರ್ಬಂಧಿಸುವಜನ ಪ್ರಾತಿನಿಧ್ಯ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ (ಪಿಐಎಲ್) ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಸಂಬಂಧ ಸೋಮವಾರ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದಿಂದ ಅಭಿಪ್ರಾಯ ಕೇಳಿದೆ.
ಆದಿತ್ಯ ಪ್ರಸನ್ನ ಭಟ್ಟಾಚಾರ್ಯ ಎಂಬುವವರು 2019ರಲ್ಲಿ ಸಲ್ಲಿಸಿದ್ದ ಪಿಐಎಲ್‌ನ ವಿಚಾರಣೆ ನಡೆಸಿದಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್, ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್ ಮತ್ತು ಬೇಲಾ ಎಂ.ತ್ರಿವೇದಿ ಅವರನ್ನೊಳಗೊಂಡ ನ್ಯಾಯಪೀಠವು ಕೇಂದ್ರ ಗೃಹ ಸಚಿವಾಲಯ ಹಾಗೂ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದೆ.
ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ 29ಕ್ಕೆ ಮುಂದೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.