ADVERTISEMENT

ಗ್ಯಾನವಾಪಿ: ಮಸೀದಿ ಸಮಿತಿ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2024, 13:37 IST
Last Updated 1 ಮಾರ್ಚ್ 2024, 13:37 IST
ಗ್ಯಾನವಾಪಿ ಮಸೀದಿ
ಗ್ಯಾನವಾಪಿ ಮಸೀದಿ   

ನವದೆಹಲಿ: ವಾರಾಣಸಿಯ ಗ್ಯಾನವಾಪಿ ಮಸೀದಿ ಇರುವ ಜಾಗದಲ್ಲಿ ದೇವಸ್ಥಾನದ ಪುನರ್‌ ನಿರ್ಮಾಣ ಆಗಬೇಕು ಎಂಬ ಕುರಿತ ವ್ಯಾಜ್ಯದ ವಿಚಾರಣೆಗೆ ಅನುಮತಿ ನೀಡಿದ್ದ ಅಲಹಾಬಾದ್ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಒಪ್ಪಿಗೆ ಸೂಚಿಸಿದೆ.

‘ಈ ಅರ್ಜಿಯನ್ನು ಮುಖ್ಯ ಪ್ರಕರಣದೊಂದಿಗೆ ಸೇರಿಸುತ್ತೇವೆ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್‌ ಮಿಶ್ರಾ ಅವರಿದ್ದ ಪೀಠ ಹೇಳಿತು.

ಗ್ಯಾನವಾಪಿ ಮಸೀದಿಯ ಆಡಳಿತ ನಿರ್ವಹಣೆಯ ಹೊಣೆ ಹೊತ್ತಿರುವ ಅಂಜುಮನ್ ಇಂತೆಜಾಮಿಯಾ ಸಮಿತಿಯು ಈ ಅರ್ಜಿ ಸಲ್ಲಿಸಿತ್ತು. 

ADVERTISEMENT

ಮಸೀದಿ ಇರುವ ಜಾಗದಲ್ಲಿ ದೇವಸ್ಥಾನದ ಪುನರ್‌ ನಿರ್ಮಾಣ ಆಗಬೇಕು ಎಂಬ ಮನವಿ ಹೊಂದಿರುವ, 1991ರಲ್ಲಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಪ್ರಶ್ನಿಸಿ ಮಸೀದಿ ಸಮಿತಿ ಮತ್ತು ಉತ್ತರ ಪ್ರದೇಶ ಕೇಂದ್ರ ಸುನ್ನಿ ವಕ್ಫ್ ಮಂಡಳಿ ಸಲ್ಲಿಸಿದ್ದ ಐದು ಅರ್ಜಿಗಳನ್ನು ಅಲಹಾಬಾದ್‌ ಹೈಕೋರ್ಟ್ ಕಳೆದ ಡಿಸೆಂಬರ್‌ 19ರಂದು ತಿರಸ್ಕರಿಸಿತ್ತು. ಸ್ಥಳವೊಂದರ ಧಾರ್ಮಿಕ ಸ್ವರೂಪವನ್ನು ನ್ಯಾಯಾಲಯ ಮಾತ್ರ ನಿರ್ಧರಿಸಬಹುದು ಎಂದು ತನ್ನ ತೀರ್ಪಿನಲ್ಲಿ ತಿಳಿಸಿತ್ತು.

ವಿವಾದಿತ ಪ್ರದೇಶದ ಮಾಲೀಕತ್ವವನ್ನು ಹಾಗೂ ಅಲ್ಲಿ ಪೂಜೆಗೆ ಅವಕಾಶ ನೀಡುವಂತೆ ಮನವಿ ಮಾಡಿರುವ ಸಿವಿಲ್ ಅರ್ಜಿಗೆ ‘ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆ 1991’ ಅಡ್ಡಿ ಉಂಟುಮಾಡುವುದಿಲ್ಲ ಎಂದೂ ಸ್ಪಷ್ಟಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.