ನವದಹಲಿ: ಉತ್ತರಪ್ರದೇಶದ ಹಾಥರಸ್‌ನಲ್ಲಿ 121 ಮಂದಿಯ ಸಾವಿಗೆ ಕಾರಣವಾದ ಕಾಲ್ತುಳಿತ ಘಟನೆ ಕುರಿತ ತನಿಖೆಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಐವರ ಸಮಿತಿ ರಚಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ನಡೆಸಲಿದೆ.
ಜುಲೈ 2ರಂದು ಸಂಭವಿಸಿದ ಹಾಥರಾಸ್ ಕಾಲ್ತುಳಿತ ಕುರಿತ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲ ಮತ್ತು ಮನೋಜ್ ಮಿಶ್ರಾ ಅವರಿರುವ ಪೀಠ ವಿಚಾರಣೆ ನಡೆಸಲಿದೆ.
ವಕೀಲ ವಿಶಾಲ್ ತಿವಾರಿ ಸಲ್ಲಿಸಿದ್ದ ಈ ಅರ್ಜಿಯಲ್ಲಿ ಘಟನೆಯ ಕುರಿತು ಹಾಗೂ ಉದಾಸೀನತೆ ತೋರಿದ ಅಧಿಕಾರಿಗಳು ಮತ್ತು ಇತರರ ವಿರುದ್ಧ ಕಾನೂನು ಕ್ರಮಕೈಗೊಂಡ ಕುರಿತ ವರದಿ ಸಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಬೇಕು. ಕಾಲ್ತುಳಿತ ರೀತಿಯ ಘಟನೆಗಳನ್ನು ತಡೆಯಲು ಅಥವಾ ಹೆಚ್ಚು ಮಂದಿ ಸೇರುವ ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಸಾರ್ವಜನಿಕ ಸುರಕ್ಷತಾ ಕ್ರಮ ಕೈಗೊಳ್ಳಲು ಮಾರ್ಗಸೂಚಿಗಳನ್ನು ಪ್ರಕಟಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಬೇಕು ಎಂದೂ ಅರ್ಜಿಯಲ್ಲಿ ಕೋರಲಾಗಿದೆ.
ಭೋಲೆ ಬಾಬಾ ಮತ್ತು ಸಾಕರ್ ವಿಶ್ವಹರಿ ಎಂದು ಖ್ಯಾತರಾದ ಬಾಬಾ ನಾರಾಯಣ ಹರಿ ಜುಲೈ 2ರಂದು ಹಾಥರಸ್ ಜಿಲ್ಲೆಯ ಫೂಲರಾಯ್ ಗ್ರಾಮದಲ್ಲಿ ನಡೆದ ‘ಸತ್ಸಂಗ’ ಕಾರ್ಯಕ್ರಮದಲ್ಲಿ 2.5 ಲಕ್ಷ ಮಂದಿ ಪಾಲ್ಗೊಂಡಿದ್ದರು. ಈ ಘಟನೆಯಲ್ಲಿ ಕಾಲ್ತುಳಿತ ಸಂಭವಿಸಿ 121 ಮಂದಿ ಮೃತಪಟ್ಟಿದ್ದರು.
ಕಾರ್ಯಕ್ರಮದಲ್ಲಿ 80 ಸಾವಿರ ಜನರು ಪಾಲ್ಗೊಳ್ಳಲು 2.5 ಲಕ್ಷ ಜನರನ್ನು ಸೇರಿಸುವ ಮೂಲಕ ಷರತ್ತುಗಳನ್ನು ಉಲ್ಲಂಘಿಸಿದ ಹಾಗೂ ಸಾಕ್ಷ್ಯಾಧಾರಗಳನ್ನು ಮುಚ್ಚಿಟ್ಟ ಆರೋಪದ ಮೇರೆಗೆ ಆಯೋಜಕರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.