ನವದೆಹಲಿ: 2018ರಿಂದಲೂ ಖಾಲಿ ಇರುವ ಭಾರತದ ಕಾನೂನು ಆಯೋಗದ ಅಧ್ಯಕ್ಷರ ಹುದ್ದೆಗೆ ನೇಮಕಾತಿ ಮಾಡುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಅ.10) ಕೈಗೆತ್ತಿಕೊಳ್ಳಲಿದೆ.
ಬಿಜೆಪಿ ಮುಖಂಡ ಹಾಗೂ ವಕೀಲರಾದ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಕಳೆದ ವರ್ಷ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಮತ್ತು ಎಸ್. ರವೀಂದ್ರ ಭಟ್ ಅವರನ್ನೊಳಗೊಂಡ ನ್ಯಾಯಪೀಠವು ಸೋಮವಾರ ವಿಚಾರಣೆ ನಡೆಸಲಿದೆ.
2020ರ ಫೆ.19ರಂದು 22ನೇ ಕಾನೂನು ಆಯೋಗದ ರಚನೆಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದ್ದರೂ, ಇದುವರೆಗೆ ಆಯೋಗದ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿ ನಡೆದಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
‘2018ರ ಸೆಪ್ಟೆಂಬರ್ 1ರಿಂದ ಭಾರತದ ಕಾನೂನು ಆಯೋಗವು ಕೆಲಸ ಮಾಡುತ್ತಿಲ್ಲ. ಹಾಗಾಗಿ, ಕೇಂದ್ರ ಸರ್ಕಾರವು ವಿವಿಧ ಕಾನೂನಿನ ವಿಷಯಗಳ ಕುರಿತಂತೆ ಆಯೋಗದ ವಿಶೇಷ ತಜ್ಞರ ಸಮಿತಿಯಿಂದ ಯಾವುದೇ ರೀತಿಯ ಪ್ರಯೋಜನವನ್ನೂ ಪಡೆಯುತ್ತಿಲ್ಲ’ ಎಂದೂ ಅರ್ಜಿಯಲ್ಲಿ ಹೇಳಲಾಗಿದೆ.
ಪ್ರಕರಣಗಳ ತ್ವರಿತ ವಿಲೇವಾರಿ, ದಾವೆಗಳ ವೆಚ್ಚವನ್ನು ಕಡಿಮೆ ಮಾಡಲು ನ್ಯಾಯ ವಿತರಣಾ ವ್ಯವಸ್ಥೆಗಳಲ್ಲಿ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಕಾನೂನು ಆಯೋಗವು ಅಧ್ಯಯನ ಮತ್ತು ಸಂಶೋಧನೆಗಳನ್ನು ಕೈಗೊಳ್ಳುತ್ತದೆ.
ಕಳೆದ ವರ್ಷ ಮನವಿಗೆ ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ, ಕೇಂದ್ರ ಸರ್ಕಾರವು ಕಾನೂನು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿ ಸಂಬಂಧಿತ ಅಧಿಕಾರಿಗಳೊಂದಿಗೆ ಪರಿಗಣನೆಯಲ್ಲಿದೆ ಎಂದು ವಿವರಣೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.