ADVERTISEMENT

ಜುಲೈ 18ಕ್ಕೆ ನೀಟ್ ಅಕ್ರಮ ಕುರಿತ ಅರ್ಜಿಗಳ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್

ಪಿಟಿಐ
Published 11 ಜುಲೈ 2024, 12:48 IST
Last Updated 11 ಜುಲೈ 2024, 12:48 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್–ಯುಜಿ 2024ರಲ್ಲಿ ನಡೆದಿದೆ ಎನ್ನಲಾದ ಪ್ರಶ್ನೆಪತ್ರಿಕೆ ಸೋರಿಕೆ ಮತ್ತಿತರ ಅಕ್ರಮಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜುಲೈ 18ಕ್ಕೆ ಮುಂದೂಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು, ಕೇಂದ್ರ ಸರ್ಕಾರ ಮತ್ತು ಪ್ರತಿಷ್ಠಿತ ಪರೀಕ್ಷೆಯನ್ನು ನಡೆಸುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು(ಎನ್‌ಟಿಎ) ಸುಪ್ರೀಂ ಕೋರ್ಟ್‌ನ ಜುಲೈ 8ರ ಆದೇಶಕ್ಕೆ ಅನುಸಾರವಾಗಿ ತಮ್ಮ ಅಫಿಡವಿಟ್‌ಗಳನ್ನು ಸಲ್ಲಿಸಿವೆ ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, ಕೆಲವು ಅರ್ಜಿದಾರರ ಪರ ಹಾಜರಾಗುವ ವಕೀಲರಿಗೆ ಕೇಂದ್ರ ಮತ್ತು ಎನ್‌ಟಿಎ ಸಲ್ಲಿಸಿದ ಅಫಿಡವಿಟ್‌ಗಳ ಕಾಪಿ ಇನ್ನೂ ತಲುಪಿಲ್ಲ ಎಂಬುದನ್ನು ಗಣನೆಗೆ ತೆಗೆದುಕೊಂಡಿದೆ. ಹೀಗಾಗಿ, ಪ್ರಕರಣದ ವಿಚಾರಣೆಯನ್ನು 18ಕ್ಕೆ ಮುಂದೂಡಿದೆ.

ADVERTISEMENT

ಕೇಂದ್ರ ಸರ್ಕಾರ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ನೀಟ್ ಪರೀಕ್ಷೆಯಲ್ಲಿ ಅಕ್ರಮದ ಆರೋಪವನ್ನು ಸ್ಪಷ್ಟವಾಗಿ ವಿರೋಧಿಸಲಾಗಿದೆ. ಅಲ್ಲದೆ, ಕೆಲವು ಆಯ್ದ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಅವ್ಯವಹಾರ ನಡೆದಿದೆ ಎಂಬ ಆರೋಪಗಳನ್ನು ಐಐಟಿ-ಮದ್ರಾಸ್‌ನ ಸಮಗ್ರ ವರದಿಯು ಅಲ್ಲಗಳೆದಿದೆ ಎಂಬುದನ್ನೂ ಉಲ್ಲೇಖಿಸಲಾಗಿದೆ. ಸಾಮೂಹಿಕ ಪರೀಕ್ಷಾ ಅಕ್ರಮ ಅಥವಾ ಸ್ಥಳೀಯ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟ ಆರೋಪಗಳಲ್ಲಿ ಹುರುಳಿಲ್ಲ ಎಂದು ತಿಳಿಸಲಾಗಿದೆ.

ನೀಟ್ ಪರೀಕ್ಷೆಯಲ್ಲಿ ಕೇವಲ 47 ವಿದ್ಯಾರ್ಥಿಗಳು ಮಾತ್ರ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಒಎಂಆರ್‌ ಶೀಟ್‌ ಅಕ್ರಮಗಳಲ್ಲಿ ಭಾಗಿಯಾಗಿರುವ ಸಂಶಯ ವ್ಯಕ್ತವಾಗಿದೆ ಎಂದು ಎನ್‌ಟಿಎ ಸಹ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.

ಮೇ 5ರಂದು ನಡೆದ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಕೆಲವು ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಕೃಪಾಂಕ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ತನಿಖೆ ನಡೆಸುತ್ತಿರುವ ಸಿಬಿಐ 8 ಜನರನ್ನು ಬಂಧಿಸಿದೆ.

ಅರ್ಜಿದಾರರ ಪರ ವಕೀಲರ ಮನವಿ

ಈ ವೇಳೆ ಅರ್ಜಿದಾರರ ಪರ ವಕೀಲರು, ಇದೇ 15ರಂದು ವಿಚಾರಣೆ ನಡೆಸುವಂತೆ ಕೋರಿದರು. ಆ ದಿನ ತಾನು ಲಭ್ಯವಿರುವುದಿಲ್ಲ ಎಂದು ಮೆಹ್ತಾ ಅವರು ತಿಳಿಸಿದರು. ಬಳಿಕ ಪೀಠವು ಇದೇ 18ಕ್ಕೆ ವಿಚಾರಣೆ ನಿಗದಿಪಡಿಸಿತು.

‘ನೀಟ್‌–ಯುಜಿ’ ಅಕ್ರಮ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ, ಇಲ್ಲಿಯವರೆಗಿನ ತನಿಖೆಯ ಪ್ರಗತಿ ಕುರಿತ ಸ್ಥಿತಿಗತಿ ವರದಿ ಸಲ್ಲಿಸಿದೆ ಎಂದು ಪೀಠ ತಿಳಿಸಿತು.

ಹೆಚ್ಚುವರಿ ಅಫಿಡವಿಟ್‌ನಲ್ಲಿ ಏನಿದೆ?:

ಪ್ರಸಕ್ತ ಸಾಲಿನ ‘ನೀಟ್‌– ಯುಜಿ’ ಫಲಿತಾಂಶಗಳ ದತ್ತಾಂಶ ವಿಶ್ಲೇಷಣೆಯನ್ನು ಐಐಟಿ ಮದ್ರಾಸ್‌ ನಡೆಸಿದ್ದು, ಯಾವುದೇ ‘ಸಾಮೂಹಿಕ ನಕಲು’ ಅಥವಾ ನಿರ್ದಿಷ್ಟ ಸಂಖ್ಯೆಯ ಅಭ್ಯರ್ಥಿಗಳು ಲಾಭ ಪಡೆದಿರುವುದು ಕಂಡು ಬಂದಿಲ್ಲ ಎಂದು ಅದು ಹೇಳಿದೆ ಎಂಬುದನ್ನು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಮೇ 5ರಂದು ನಡೆದಿದ್ದ ಪರೀಕ್ಷೆಯಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರಗಳು ನಡೆದಿರುವುದು ಕಂಡುಬಂದರೆ ಮರು ಪರೀಕ್ಷೆಗೆ ಆದೇಶಿಸಬಹುದು ಎಂದು ಪೀಠವು ಜುಲೈ 8ರಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಅಫಿಡವಿಟ್‌ನಲ್ಲಿ ಸರ್ಕಾರ ನೀಡಿರುವ ಸಮರ್ಥನೆ ಮಹತ್ವ ಪಡೆದುಕೊಂಡಿದೆ. 

ನಾಲ್ಕು ಸುತ್ತು ಕೌನ್ಸೆಲಿಂಗ್‌:

ಈ ವರ್ಷದ ವೈದ್ಯಕೀಯ ಕೋರ್ಸ್‌ಗಳ ಕೌನ್ಸೆಲಿಂಗ್‌ ಪ್ರಕ್ರಿಯೆಯನ್ನು ಜುಲೈ ಮೂರನೇ ವಾರದಿಂದ ನಾಲ್ಕು ಸುತ್ತುಗಳಲ್ಲಿ ನಡೆಸಲಾಗುವುದು ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಎನ್‌ಟಿಎ ಸಹ ಇದೇ ರೀತಿ ಪ್ರತ್ಯೇಕವಾಗಿ ಹೆಚ್ಚುವರಿ ಅಫಿಡವಿಟ್‌ ಸಲ್ಲಿಸಿದೆ. ರಾಷ್ಟ್ರೀಯ, ರಾಜ್ಯ ಮತ್ತು ನಗರ ಮಟ್ಟದಲ್ಲಿ ಅಭ್ಯರ್ಥಿಗಳ ಅಂಕಗಳ ವಿಶ್ಲೇಷಣೆ ನಡೆಸಲಾಗಿದೆ ಎಂದು ಅದು ಹೇಳಿದೆ.

ಅಂಕಗಳ ನೀಡಿಕೆ ಸಾಮಾನ್ಯವಾಗಿದೆ ಎಂಬುದನ್ನು ಈ ವಿಶ್ಲೇಷಣೆ ಸೂಚಿಸುತ್ತದೆ. ಅಲ್ಲದೆ ಅಂಕಗಳ ನೀಡಿಕೆ ಮೇಲೆ ಪ್ರಭಾವ ಬೀರುವ ಯಾವುದೇ ಬಾಹ್ಯ ಅಂಶಗಳು ಕಂಡುಬಂದಿಲ್ಲ ಎಂದು ಎನ್‌ಟಿಎ ತಿಳಿಸಿದೆ. ಜತೆಗೆ ಅದು ಪ್ರಶ್ನೆ ಪತ್ರಿಕೆಗಳ ಗೋಪ್ಯ ಮುದ್ರಣ, ಸಾಗಣೆ ಮತ್ತು ವಿತರಣೆ ವ್ಯವಸ್ಥೆಯ ವಿವರಗಳನ್ನೂ ಒದಗಿಸಿದೆ. 

ಜುಲೈ 8ರ ವಿಚಾರಣೆ ವೇಳೆ ಪೀಠವು, ‘ನೀಟ್‌–ಯುಜಿ’ ಪರೀಕ್ಷೆಯ ಪಾವಿತ್ರ್ಯವು ಉಲ್ಲಂಘನೆಯಾಗಿದೆ ಎಂಬುದನ್ನು ಗಮನಿಸಿತ್ತು. ಇದು ಇಡೀ ಪರೀಕ್ಷಾ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಿದ್ದರೆ ಮರು ಪರೀಕ್ಷೆಗೆ ಆದೇಶಿಸಬಹುದು ಎಂದೂ ಪೀಠ ಹೇಳಿತ್ತು. 

ಅಲ್ಲದೆ ಅಕ್ರಮಗಳಲ್ಲಿ ಭಾಗಿಯಾದವರು ಮತ್ತು ತಪ್ಪು ಮಾಡಿದವರ ಸಂಖ್ಯೆ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯ ಸಮಯ ಮತ್ತು ವಿಧಾನ ಸೇರಿದಂತೆ ವಿವರಗಳನ್ನು ಒದಗಿಸುವಂತೆ ಸೂಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.