ADVERTISEMENT

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಬೇಡಿಕೆ: ನಾಳೆ ತೀರ್ಪು

ಪಿಟಿಐ
Published 16 ಅಕ್ಟೋಬರ್ 2023, 15:34 IST
Last Updated 16 ಅಕ್ಟೋಬರ್ 2023, 15:34 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ವಿವಿಧ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ (ಅ.17) ತೀರ್ಪು ನೀಡಲಿದೆ. 10 ದಿನಗಳ ಕಾಲ ವಿಚಾರಣೆ ನಡೆಸಿದ್ದ ನ್ಯಾಯಪೀಠವು ಈ ವರ್ಷದ ಮೇ 11ರಂದು ತೀರ್ಪು ಕಾಯ್ದಿರಿಸಿತ್ತು.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಸಾಂವಿಧಾನಿಕ ಪೀಠದಲ್ಲಿ ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌, ಎಸ್‌.ರವೀಂದ್ರ ಭಟ್, ಹಿಮಾ ಕೊಹ್ಲಿ, ಪಿ.ಎಸ್‌.ನರಸಿಂಹ ಅವರಿದ್ದಾರೆ.

ಹಿರಿಯ ವಕೀಲರಾದ ಎ.ಎಂ.ಸಿಂಘ್ವಿ, ರಾಜು ರಾಮಚಂದ್ರನ್‌, ಕೆ.ವಿ.ವಿಶ್ವನಾಥನ್‌ (ಈಗ ಸುಪ್ರಿಂ ಕೋರ್ಟ್‌ನ ನ್ಯಾಯಮೂರ್ತಿ), ಆನಂದ್ ಗ್ರೋವರ್, ಸೌರಬ್ ಕೃಪಾಲ್‌ ಅವರು ಈ ಬಗ್ಗೆ ಕೋರ್ಟ್‌ನ ಮೆಟ್ಟಿಲೇರಿದ್ದ ವಿವಿಧ 21 ಅರ್ಜಿದಾರರ ಪರವಾಗಿ ವಾದ ಮಂಡಿಸಿದ್ದರು.

ADVERTISEMENT

‘ಈ ಕುರಿತ ತನ್ನ ಪ್ರಶ್ನೆಗೆ ಏಳು ರಾಜ್ಯಗಳು ಪ್ರತಿಕ್ರಿಯಿಸಿವೆ. ಈ ಪೈಕಿ ರಾಜಸ್ಥಾನ, ಆಂಧ್ರಪ್ರದೇಶ, ಅಸ್ಸಾಂ ರಾಜ್ಯಗಳು ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕು ಎಂಬ ಅರ್ಜಿದಾರರ ಮನವಿಗೆ ವಿರೋಧ ವ್ಯಕ್ತಪಡಿಸಿವೆ ಎಂದು ತಿಳಿಸಿತ್ತು.

‘ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕು. ಪೂರಕವಾಗಿ 1954ರ ವಿಶೇಷ ವಿವಾಹ ಕಾಯ್ದೆಯ (ಎಸ್‌ಎಂಎ) ನಿಬಂಧನೆಗಳನ್ನು ಮರು ವ್ಯಾಖ್ಯಾನಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.

‘ಕಾಯ್ದೆಯ ಸೆಕ್ಷನ್‌ 4 (ಸಿ) ಅಡಿ ‘ಪುರುಷ‘ ಮತ್ತು ‘ಮಹಿಳೆ’ ವಿವಾಹಕ್ಕಷ್ಟೇ ಕಾನೂನು ಮಾನ್ಯತೆ ನೀಡಲಾಗುತ್ತದೆ. ಈ ಮೂಲಕ ಸಲಿಂಗ ವಿವಾಹದ ಜೋಡಿಗೆ ಪಕ್ಷಪಾತ ಆಗುತ್ತಿದ್ದು, ಅವರಿಗೆ ವಿವಾಹದ ಅನುಕೂಲಗಳಾದ ದತ್ತು, ಬಾಡಿಗೆ ತಾಯ್ತನ, ಉದ್ಯೋಗಾವಕಾಶ, ನಿವೃತ್ತಿ ಸೌಲಭ್ಯದ ಹಕ್ಕುಗಳನ್ನು ನಿರಾಕರಿಸಲಾಗುತ್ತದೆ’ ಎಂದಿದ್ದರು.

‘ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡದಿರುವುದು ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಘನತೆಯ ಹಕ್ಕುಗಳ ನಿರಾಕರಣೆಯೂ ಆಗಿದೆ. ಈ ಕಾರಣದಿಂದ ಸೆಕ್ಷನ್‌ 4(ಸಿ) ಅಸಾಂವಿಧಾನಿಕ ಎಂದು ಘೋಷಿಸಬೇಕು’ ಎಂದೂ ಅರ್ಜಿದಾರರು ಪ್ರತಿಪಾದಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.