ನವದೆಹಲಿ: ಸಾರ್ವಜನಿಕ ಭದ್ರತಾ ಕಾನೂನಿನ ಅಡಿಯಲ್ಲಿ ವಶಕ್ಕೆ ಪಡೆಯಲಾಗಿದ್ದ 20ಕ್ಕೂ ಹೆಚ್ಚು ಮಂದಿಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿನ ಬಂದಿಖಾನೆಯಿಂದ ಉತ್ತರಪ್ರದೇಶ ಹಾಗೂ ಹರಿಯಾಣದಲ್ಲಿನ ವಿವಿಧ ಜೈಲುಗಳಿಗೆ ಸ್ಥಳಾಂತರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಹೈಕೋರ್ಟ್‌ಗೆ ವರ್ಗಾಯಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಹಾಗೂ ಜೆ.ಬಿ.ಪಾರ್ದಿವಾಲಾ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠ, ಈ ಅರ್ಜಿಗಳ ವಿಚಾರಣೆಯನ್ನು ತ್ವರಿತವಾಗಿ ನಡೆಸುವಂತೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರಿಗೆ ನಿರ್ದೇಶಿಸಿದೆ. ಹೈಕೋರ್ಟ್ ನ್ಯಾಯಪೀಠದ ಎದುರು ಈ ಕುರಿತು ಮನವಿ ಸಲ್ಲಿಸಲು ನೀವು ಸ್ವತಂತ್ರರಾಗಿದ್ದೀರಿ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಕಾಲಿನ್ ಗೊಂಸಾಲ್ವೆಸ್ ಅವರಿಗೆ ತಿಳಿಸಿದೆ.
‘ಈ ನ್ಯಾಯಾಲಯದ ಆದೇಶದ ಅನುಸಾರ ಹೈಕೋರ್ಟ್ ಅರ್ಜಿಗಳ ವಿಚಾರಣೆ ನಡೆಸಲಿದೆ. ಹೀಗಾಗಿ ಈ ವಿಚಾರವನ್ನು ಇಲ್ಲಿ ಪ್ರಸ್ತಾಪಿಸುವ ಅಗತ್ಯವಿಲ್ಲ’ ಎಂದೂ ಹೇಳಿದೆ.
ಕೇಂದ್ರಾಡಳಿತ ಪ್ರದೇಶದ (ಜಮ್ಮು ಮತ್ತು ಕಾಶ್ಮೀರ) ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಹೊರರಾಜ್ಯಗಳ ಜೈಲಿನಲ್ಲಿರುವ ಬಂಧಿತರನ್ನು ಭೇಟಿ ಮಾಡುವುದಕ್ಕೆ ಅವರ ಕುಟುಂಬದವರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇದು ಹಿಂದಿನಿಂದಲೂ ಬೆಳೆದು ಬಂದಿದೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
‘ಬಂಧಿತರನ್ನೆಲ್ಲಾ ಹೊರ ರಾಜ್ಯಗಳ ಜೈಲುಗಳಿಗೆ ಸ್ಥಳಾಂತರಿಸಿರುವುದರಿಂದಾಗಿ ಅವರ ಕುಟುಂಬದವರು ಭೇಟಿಯ ಅವಕಾಶದಿಂದ ವಂಚಿತರಾಗಲಿದ್ದಾರೆ’ ಎಂದು ಅರ್ಜಿದಾರರ ಪರ ವಕೀಲ ಕಾಲಿನ್ ಗೊಂಸಾಲ್ವೆಸ್ ವಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.