ADVERTISEMENT

ಜಮ್ಮು–ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ಶಾಶ್ವತವಲ್ಲ: ಸುಪ್ರೀಂ ಕೋರ್ಟ್

ಪಿಟಿಐ
Published 11 ಡಿಸೆಂಬರ್ 2023, 15:54 IST
Last Updated 11 ಡಿಸೆಂಬರ್ 2023, 15:54 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸಂವಿಧಾನದ 370ನೆಯ ವಿಧಿಯ ಅಡಿಯಲ್ಲಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆಯುವ ಕೇಂದ್ರ ಸರ್ಕಾರದ ತೀರ್ಮಾನವನ್ನು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಸೋಮವಾರ ಸರ್ವಾನುಮತದಿಂದ ಎತ್ತಿಹಿಡಿದಿದೆ.

ಇದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ತೀರ್ಮಾನಕ್ಕೆ ಸಿಕ್ಕ ಜಯ ಎಂದು ವಿಶ್ಲೇಷಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ‘ಆದಷ್ಟು ಬೇಗ ಮರಳಿಸಬೇಕು’ ಎಂದು ಕೋರ್ಟ್‌ ತಾಕೀತು ಮಾಡಿದೆ. ಅಲ್ಲದೆ, 2024ರ ಸೆಪ್ಟೆಂಬರ್‌ 30ಕ್ಕೆ ಮೊದಲು ಅಲ್ಲಿ ವಿಧಾನಸಭಾ ಚುನಾವಣೆ ನಡೆಸಬೇಕು ಎಂದು ಹೇಳಿದೆ.

ಜಮ್ಮು ಮತ್ತು ಕಾಶ್ಮೀರವು 1947ರಲ್ಲಿ ಭಾರತ ಒಕ್ಕೂಟವನ್ನು ಸೇರಿದ ನಂತರದಲ್ಲಿ 370ನೆಯ ವಿಧಿಯ ಅಡಿಯಲ್ಲಿ ವಿಶೇಷ ಸ್ಥಾನಮಾನ ಪಡೆದಿತ್ತು. ಈ ವಿಧಿಯ ಸ್ವರೂಪದ ಕುರಿತು ದಶಕಗಳಿಂದ ನಡೆದುಬಂದ ಚರ್ಚೆಗೆ ಈ ತೀರ್ಪು ನಿರ್ಣಾಯಕ ಉತ್ತರವೊಂದನ್ನು ನೀಡಿದೆ. 

ADVERTISEMENT

ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸೂರ್ಯಕಾಂತ್ ಅವರ ಪರವಾಗಿ ತೀರ್ಪು ಬರೆದಿರುವ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರು, 370ನೆಯ ವಿಧಿಯ ಅಡಿಯಲ್ಲಿನ ವಿಶೇಷ ಸ್ಥಾನಮಾನವು ಶಾಶ್ವತವಾಗಿ ಇರುವಂಥದ್ದಾಗಿರಲಿಲ್ಲ, ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ರಚನಾ ಸಭೆಯ ಅನುಪಸ್ಥಿತಿಯಲ್ಲಿ ವಿಶೇಷ ಸ್ಥಾನಮಾನವನ್ನು ಹಿಂಪಡೆಯುವ ಅಧಿಕಾರವು ದೇಶದ ರಾಷ್ಟ್ರಪತಿಗೆ ಇದೆ ಎಂದಿದ್ದಾರೆ.

‘370ನೆಯ ವಿಧಿ ಹಾಗೂ 1ನೆಯ ವಿಧಿಯನ್ನು ಒಟ್ಟಾಗಿ ಓದಿದಾಗ, ಜಮ್ಮು ಮತ್ತು ಕಾಶ್ಮೀರವನ್ನು ದೇಶದ ಒಂದು ಭಾಗವನ್ನಾಗಿ ವಿಲೀನಗೊಳಿಸಿದ್ದು ಪರಿಪೂರ್ಣವಾಗಿತ್ತು ಎಂಬುದರಲ್ಲಿ ಯಾವ ಅನುಮಾನವೂ ಉಳಿಯುವುದಿಲ್ಲ. ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸಿದ್ದು ತಾತ್ಕಾಲಿಕವಾಗಿತ್ತು ಎಂಬುದನ್ನು 370ನೆಯ ವಿಧಿಯ ಯಾವ ವ್ಯಾಖ್ಯಾನವೂ ಹೇಳುವುದಿಲ್ಲ’ ಎಂದು ಸಿಜೆಐ ಹೇಳಿದ್ದಾರೆ.

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸಂಜೀವ್ ಖನ್ನಾ ಅವರು ಸಹಮತದ ಪ್ರತ್ಯೇಕ ತೀರ್ಪುಗಳನ್ನು ಬರೆದಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯದಿಂದ ಲಡಾಖ್‌ ಅನ್ನು ಪ್ರತ್ಯೇಕಿಸಿ, ಅದನ್ನು ಕೇಂದ್ರಾಡಳಿತ ಪ್ರದೇಶವಾಗಿಸಿದ ಕೇಂದ್ರ ಸರ್ಕಾರದ ತೀರ್ಮಾನವನ್ನು ಕೋರ್ಟ್‌ ಎತ್ತಿಹಿಡಿದಿದೆ. ‘ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ 2024ರ ಸೆಪ್ಟೆಂಬರ್‌ 30ಕ್ಕೆ ಮೊದಲು ಚುನಾವಣೆ ನಡೆಸಬೇಕು’ ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಕೋರ್ಟ್ ಸೂಚನೆ ನೀಡಿದೆ.

370ನೆಯ ವಿಧಿಯ ಕಾರಣದಿಂದಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಾರ್ವಭೌಮ ಸ್ಥಾನ ಇತ್ತು ಎಂಬುದನ್ನು ಒಪ್ಪುವುದಾದರೆ, ಒಕ್ಕೂಟದ ಜೊತೆ ವಿಶೇಷ ಒಪ್ಪಂದ ಹೊಂದಿರುವ ಇತರ ರಾಜ್ಯಗಳಿಗೂ ಇಂಥದ್ದೇ ಸಾರ್ವಭೌಮತ್ವ ಇರುತ್ತದೆ ಎಂಬ ವಾದ ಎದುರಾಗುತ್ತದೆ. ‘ಆದರೆ ವಾಸ್ತವ ಹೀಗಿಲ್ಲ... ಜಮ್ಮು ಮತ್ತು ಕಾಶ್ಮೀರದ ವಿಶೇಷ ಸಂದರ್ಭವು ವಿಶೇಷ ಕಾನೂನಿನ, ಅಂದರೆ 370ನೆಯ ವಿಧಿಯ, ಅಗತ್ಯವನ್ನು ಸೃಷ್ಟಿಸಿತು. 370ನೆಯ ವಿಧಿಯು ಅಸಮ ಒಕ್ಕೂಟ ವ್ಯವಸ್ಥೆಯ ಒಂದು ನಿದರ್ಶನ. ಇತರ ರಾಜ್ಯಗಳ ಪ್ರಜೆಗಳಿಗೆ ಇರುವುದಕ್ಕಿಂತ ಭಿನ್ನವಾದ ಸಾರ್ವಭೌಮ ಸ್ಥಾನಮಾನವು ಜಮ್ಮು ಮತ್ತು ಕಾಶ್ಮೀರದ ಜನರಿಗೆ ಇಲ್ಲ’ ಎಂದು ಸಂವಿಧಾನ ಪೀಠವು ಸ್ಪಷ್ಟಪಡಿಸಿದೆ.

ಮಹಾರಾಜ ಹರಿಸಿಂಗ್ ಅವರು ವಿಲೀನ ಸನ್ನದಿಗೆ 1947ರಲ್ಲಿ ಸಹಿ ಮಾಡುವಾಗ ರಕ್ಷಣೆ, ಸಂವಹನ ಮತ್ತು ವಿದೇಶ ವ್ಯವಹಾರಗಳ ವಿಚಾರವಾಗಿ ಮಾತ್ರ ಸಾರ್ವಭೌಮತ್ವವನ್ನು ಬಿಟ್ಟುಕೊಟ್ಟಿದ್ದರು ಎಂದು ಅರ್ಜಿದಾರರು ವಾದಿಸಿದ್ದರು. ಆದರೆ, ಹಿಂದೆ ರಾಜ್ಯವಾಗಿದ್ದ ಜಮ್ಮು ಮತ್ತು ಕಾಶ್ಮೀರವು, ವಿಲೀನ ಸನ್ನದಿಗೆ ಸಹಿ ಮಾಡಿದ ನಂತರದಲ್ಲಿ, ದೇಶದ ಸಂವಿಧಾನ ಅಂಗೀಕಾರವಾದ ನಂತರದಲ್ಲಿ ಸಾರ್ವಭೌತ್ವದ ಯಾವುದೇ ಅಂಶವನ್ನು ಉಳಿಸಿಕೊಂಡಿಲ್ಲ ಎಂದು ಸಿಜೆಐ ಸ್ಪಷ್ಟಪಡಿಸಿದ್ದಾರೆ.

ತೀರ್ಪಿನ ಪ್ರಮುಖ ಅಂಶಗಳು...

  • ದೇಶದ ಸಂವಿಧಾನವು ಜಮ್ಮು ಮತ್ತು ಕಾಶ್ಮೀರಕ್ಕೆ ಪರಿಪೂರ್ಣವಾಗಿ ಅನ್ವಯವಾಗುತ್ತದೆ ಎಂದು ಹೇಳುವ ಸಾಂವಿಧಾನಿಕ ಆದೇಶ–272 (ಸಿಒ272) ಸಿಂಧುವಾಗಿದೆಯೇ?

  • ಈ ಪ್ರಶ್ನೆಯನ್ನು ಸಂವಿಧಾನ ಪೀಠವು ಪರಿಶೀಲನೆಗೆ ಒಳಪಡಿಸಿದೆ. ‘ದೇಶದ ಸಂವಿಧಾನವು ಜಮ್ಮು ಮತ್ತು ಕಾಶ್ಮೀರಕ್ಕೆ ಪರಿಪೂರ್ಣವಾಗಿ ಅನ್ವಯವಾಗುತ್ತದೆ ಎಂಬ ಆದೇಶ ಹೊರಡಿಸಲು ರಾಷ್ಟ್ರಪತಿಯವರಿಗೆ ರಾಜ್ಯ ಸರ್ಕಾರದ ಸಹಮತ ಪಡೆಯುವ ಅಗತ್ಯ ಇಲ್ಲ. ರಾಷ್ಟ್ರಪತಿಯವರು ಇಂತಹ ಆದೇಶ (ಸಿಒ272) ಹೊರಡಿಸಿದ್ದು ಯಾವುದೇ ಕೆಟ್ಟ ಉದ್ದೇಶದಿಂದ ಅಲ್ಲ. ಹೀಗಾಗಿ, ದೇಶದ ಸಂವಿಧಾನವು ಜಮ್ಮು ಮತ್ತು ಕಾಶ್ಮೀರಕ್ಕೆ ಪರಿಪೂರ್ಣವಾಗಿ ಅನ್ವಯವಾಗುತ್ತದೆ ಎಂದು ಹೇಳುವಷ್ಟರಮಟ್ಟಿಗೆ ಅವರ ಆದೇಶವು ಸಿಂಧುವಾಗಿದೆ’ ಎಂದು ಕೋರ್ಟ್‌ ಹೇಳಿದೆ.

  • ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ ರಾಷ್ಟ್ರಪತಿ ಹೊರಡಿಸಿದ ಆದೇಶವು (ಸಿಒ273) ಸಿಂಧುವಾಗುತ್ತದೆಯೇ?

ಈ ಪ್ರಶ್ನೆಗೆ ಉತ್ತರ ನೀಡಿರುವ ಪೀಠವು, ‘ರಾಷ್ಟ್ರಪತಿ ಹೊರಡಿಸಿದ ಈ ಆದೇಶವು, ಜಮ್ಮು ಮತ್ತು ಕಾಶ್ಮೀರವನ್ನು ದೇಶದಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಯ ಅಂತಿಮ ಹಂತದ ರೂಪದಲ್ಲಿದೆ. ಹೀಗಾಗಿ, ಈ ಆದೇಶವು ಸಿಂಧುವಾಗುತ್ತದೆ’ ಎಂದು ಸಾರಿದೆ.

  • ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಸಂವಿಧಾನ ರಚನಾ ಸಭೆಯ ಸಹಮತ ಇಲ್ಲದೆ, 370ನೆಯ ವಿಧಿಗೆ ತಿದ್ದುಪಡಿ ತರಲು ಅವಕಾಶ ಇಲ್ಲ ಎಂದು ಕೇಂದ್ರದ ಕ್ರಮವನ್ನು ಪ್ರಶ್ನಿಸಿದ ಅರ್ಜಿದಾರರು ವಾದಿಸಿದ್ದರು. ಸಂವಿಧಾನ ರಚನಾ ಸಭೆಯು 1957ರಲ್ಲಿಯೇ ಅಂತ್ಯ ಕಂಡಿದೆ. ಸಂವಿಧಾನ ರಚನಾ ಸಭೆಯೇ ಇಲ್ಲದಿದ್ದ ಸಂದರ್ಭದಲ್ಲಿ, 370ನೆಯ ವಿಧಿಯು ಶಾಶ್ವತವಾಗು ತ್ತದೆ ಎಂದು ಅವರು ವಾದಿಸಿದ್ದರು.

 ‘ಸಂವಿಧಾನದ 370ನೆಯ ವಿಧಿಯ ಅಡಿಯಲ್ಲಿ ವಿಶೇಷ ಸ್ಥಾನಮಾನವನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ಐತಿಹಾಸಿಕ ಸಂದರ್ಭವನ್ನು ಪರಿಗಣಿಸಿದರೆ, ಅದು ತಾತ್ಕಾಲಿಕ ಅವಧಿಗೆ ಮಾತ್ರವೇ ಆಗಿತ್ತು ಎಂಬ ನಿರ್ಣಯಕ್ಕೆ ನಾವು ಬಂದಿದ್ದೇವೆ’ ಎಂದು ಸಿಜೆಐ ಬರೆದ ತೀರ್ಪಿನಲ್ಲಿ ಹೇಳಲಾಗಿದೆ.

370ನೆಯ ವಿಧಿಯನ್ನು ಯಥಾವತ್ತಾಗಿ ಓದಿದಾಗ ಕೂಡ ಅದು ತಾತ್ಕಾಲಿಕ ಉದ್ದೇಶಕ್ಕಾಗಿ ಜಾರಿಯಾಗಿತ್ತು ಎಂಬುದು ಗೊತ್ತಾಗುತ್ತದೆ. ಈ ವಿಧಿಯನ್ನು ಸಂವಿಧಾನದಲ್ಲಿನ, ತಾತ್ಕಾಲಿಕ ಹಾಗೂ ಪರಿವರ್ತನೆಯ ಅವಧಿಯ ಕೆಲವು ಉದ್ದೇಶಗಳಿಗೆ ಸಂಬಂಧಿಸಿದ ಭಾಗದಲ್ಲಿ ಸೇರಿಸಲಾಗಿದೆ. 370ನೆಯ ವಿಧಿಯ ಬದಿಯಲ್ಲಿ ನೀಡಿರುವ ಟಿಪ್ಪಣಿ ಕೂಡ, ಇದು ‘ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸಂಬಂಧಿಸಿದ ತಾತ್ಕಾಲಿಕ ಉದ್ದೇಶದ್ದು’ ಎಂಬುದನ್ನು ಹೇಳುತ್ತದೆ ಎಂದು ಪೀಠ ವಿವರಿಸಿದೆ. 

ಪ್ರತ್ಯೇಕವಾದ ತೀರ್ಪು ಬರೆದಿರುವ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರು ಈ ವಿಚಾರವಾಗಿ, 370ನೆಯ ವಿಧಿಯ ಉದ್ದೇಶವು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ನಿಧಾನವಾಗಿ ಇತರ ರಾಜ್ಯಗಳಿಗೆ ಸರಿಸಮನಾಗಿಸುವುದು ಎಂದು ಹೇಳಿದ್ದಾರೆ. 

ಸಾಮರಸ್ಯ ಆಯೋಗ ರಚಿಸಿ: ‘ಸುಪ್ರೀಂ’

ಜಮ್ಮು ಮತ್ತು ಕಾಶ್ಮೀರದಲ್ಲಿ 1980ರ ನಂತರದಲ್ಲಿ ಸರ್ಕಾರದ ಕಡೆಯಿಂದ ಹಾಗೂ ಸರ್ಕಾರೇತರ ಶಕ್ತಿಗಳಿಂದ ನಡೆದಿರುವ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆಗೆ ನಿಷ್ಪಕ್ಷಪಾತಿಯಾದ ‘ಸತ್ಯಶೋಧನೆ ಮತ್ತು ಸಾಮರಸ್ಯ ಆಯೋಗ’ ರಚಿಸಬೇಕು ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರು ತಮ್ಮ ಪ್ರತ್ಯೇಕ ತೀರ್ಪಿನಲ್ಲಿ ಶಿಫಾರಸು ಮಾಡಿದ್ದಾರೆ.

ನ್ಯಾಯಮೂರ್ತಿ ಕೌಲ್ ಅವರು ಪ್ರತ್ಯೇಕ ತೀರ್ಪು ಬರೆದಿದ್ದರೂ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಕೇಂದ್ರದ ತೀರ್ಮಾನ ಸರಿ ಎಂದು ಹೇಳಿದ್ದಾರೆ. ಕೌಲ್ ಅವರು ಜಮ್ಮು ಮತ್ತು ಕಾಶ್ಮೀರದವರು. ಹಿಂಸಾಚಾರಗಳಿಗೆ ಅಲ್ಲಿನ ಜನ ಭಾರಿ ಬೆಲೆ ತೆತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

‘ಈ ಪ್ರದೇಶದ ಜನ ಅನುಭವಿಸಿದ್ದನ್ನು ಕಂಡು ನನಗೆ ನೋವಾಗುತ್ತದೆ. ಹೀಗಾಗಿ ನಾನು ಈ ಉಪಸಂಹಾರವನ್ನು ಬರೆಯಬೇಕಾಗಿದೆ’ ಎಂದು ತಮ್ಮ ತೀರ್ಪಿನ ಕೊನೆಯಲ್ಲಿ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.