ADVERTISEMENT

ಸಾಕ್ಷಿಗಳ ಪ್ರಮಾಣಕ್ಕಿಂತ ಗುಣಮಟ್ಟ ಮುಖ್ಯ: ಸುಪ್ರೀಂ ಕೋರ್ಟ್‌

ಪಿಟಿಐ
Published 15 ಫೆಬ್ರುವರಿ 2023, 14:18 IST
Last Updated 15 ಫೆಬ್ರುವರಿ 2023, 14:18 IST
.
.   

ನವದೆಹಲಿ: 2007ರಲ್ಲಿ ಉತ್ತರ ಪ್ರದೇಶದಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂವರು ಅಪರಾಧಿಗಳಿಗೆ ನೀಡಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ಎತ್ತಿಹಿಡಿದಿದ್ದು, ‘ಸಾಕ್ಷಿಗಳ ಪ್ರಮಾಣಕ್ಕಿಂತ ಅವುಗಳ ಗುಣಮಟ್ಟ ಮುಖ್ಯ’ ಎಂದು ತಿಳಿಸಿದೆ.

ಘಟನೆಯಲ್ಲಿ ಮೃತಪಟ್ಟವರೊಬ್ಬರ ಇಬ್ಬರು ಪುತ್ರಿಯರು ದುಷ್ಕರ್ಮಿಗಳು ತಮ್ಮ ಕುಟುಂಬ ಸದಸ್ಯರನ್ನು ಕೊಲ್ಲುವುದನ್ನು ನೋಡಿದ್ದರು. ಪ್ರಕರಣ ಸಂಬಂಧ ಒಬ್ಬ ಪುತ್ರಿಯನ್ನು ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ವಿಚಾರಣೆಗೊಳಪಡಿಸಲಾಗಿತ್ತು. ಘಟನೆಯ ಸಮಯದಲ್ಲಿ ಗಾಯಗೊಂಡಿದ್ದ ಇನ್ನೊಬ್ಬ ಪುತ್ರಿ ‘ಸಂಪೂರ್ಣ ವಿಶ್ವಾಸಾರ್ಹ ಸಾಕ್ಷಿ’ ಎಂದು ಸುಪ್ರೀಂ ಕೋರ್ಟ್‌ನಿಂದ ಪರಿಗಣಿಸಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಪರಾಧಿಗಳಿಗೆ 2012ರ ಫೆಬ್ರುವರಿಯಲ್ಲಿ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಹಲವು ಮೇಲ್ಮನವಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿತ್ತು. ಈ ಮೇಲ್ಮನವಿಗಳ ವಿಚಾರಣೆ ಕೈಗೊಂಡ ನ್ಯಾಯಮೂರ್ತಿ‌ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ‌ ವಿಕ್ರಮ್ ನಾಥ್ ಅವರನ್ನೊಳಗೊಂಡ ಪೀಠವು ಅಲಹಾಬಾದ್‌ ಹೈಕೋರ್ಟ್‌ನ ತೀರ್ಪನ್ನು ಎತ್ತಿಹಿಡಿದಿದೆ.

ADVERTISEMENT

ಇದೇ ವೇಳೆ, ಪ್ರಕರಣದ ಆಪರಾಧಿಗಳಲ್ಲೊಬ್ಬರಾದ ಅಜಯ್‌ ಎಂಬುವವರು ಮೃತಪಟ್ಟಿರುವುದನ್ನೂ ನ್ಯಾಯಮೂರ್ತಿಗಳು ಪರಿಗಣಿಸಿದ್ದಾರೆ.

ವಿಚಾರಣಾ ನ್ಯಾಯಾಲಯವು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಆದರೆ, ಅಲಹಾಬಾದ್‌ ಹೈಕೋರ್ಟ್‌ ಈ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಬದಲಾಯಿಸಿತ್ತು.

‘ಮೃತರೊಬ್ಬರ ಒಬ್ಬನ ಮಗಳು ಮತ್ತು ಮತ್ತೊಬ್ಬ ಮೃತರ ತಂದೆಯನ್ನು ಸಾಕ್ಷಿಯಾಗಿ ಪರೀಕ್ಷಿಸದಿರುವುದಕ್ಕೆ ಯಾವುದೇ ಮಹತ್ವ ಇಲ್ಲ. ಪ್ರಕರಣದ ಆರೋಪವನ್ನು ಸಾಬೀತುಪಡಿಸಲು ಅಗತ್ಯವಿರುವಷ್ಟು ಸಾಕ್ಷ್ಯಗಳನ್ನು ಒದಗಿಸುವುದು ಪ್ರಾಸಿಕ್ಯೂಷನ್‌ ವಿವೇಚನೆಗೆ ಬಿಟ್ಟದ್ದು. ಪ್ರಕರಣದಲ್ಲಿ ಸಾಕ್ಷಿಗಳ ಪ್ರಮಾಣಕ್ಕಿಂತ ಸಾಕ್ಷಿಗಳ ಗುಣಮಟ್ಟ ಪ್ರಮುಖವಾದದ್ದು’ ಎಂದು ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.