ADVERTISEMENT

ಪೌರತ್ವ ಕಾಯ್ದೆ Section 6A ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌: ಏನಿದು?

ಅಸ್ಸಾಂನಲ್ಲಿ ವಲಸಿಗರಿಗೆ ಪೌರತ್ವ ನೀಡುವ ಸೆಕ್ಷನ್ * 4:1ರ ಬಹುಮತದ ತೀರ್ಪು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 1:05 IST
Last Updated 18 ಅಕ್ಟೋಬರ್ 2024, 1:05 IST
–
   

ನವದೆಹಲಿ: ಅಸ್ಸಾಂಗೆ ವಲಸೆ ಬಂದಿರುವವರಿಗೆ ಪೌರತ್ವ ನೀಡುವ, ಭಾರತೀಯ ಪೌರತ್ವ ಕಾಯ್ದೆಯ ‘ಸೆಕ್ಷನ್‌ 6ಎ’ದ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದು ಸುಪ್ರೀಂ ಕೋರ್ಟ್‌ ಗುರುವಾರ ಬಹುಮತದ ತೀರ್ಪು ನೀಡಿದೆ.

ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ಐವರು ಸದಸ್ಯರು ಇದ್ದ ಸಂವಿಧಾನ ಪೀಠವು 4:1 ರ ತೀರ್ಪು ನೀಡಿದ್ದು, ‘ಸೆಕ್ಷನ್ 6ಎ’ದ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಜಾಗೊಳಿಸಿದೆ.

ಸಿಜೆಐ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಎಂ.ಎಂ.ಸುಂದ್ರೇಶ್ ಹಾಗೂ ಮನೋಜ್‌ ಮಿಶ್ರಾ ಅವರು ‘ಸೆಕ್ಷನ್‌ 6ಎ’ದ ಸಿಂಧುತ್ವ ಎತ್ತಿ ಹಿಡಿದಿದ್ದರೆ, ಭಿನ್ನ ನಿಲುವು ತಳೆದಿರುವ ನ್ಯಾಯಮೂರ್ತಿ ಜೆ.ಬಿ.ಪಾರ್ದೀವಾಲಾ, ‘ಈ ಸೆಕ್ಷನ್‌ ಅಸಾಂವಿಧಾನಿಕ’ ಎಂದು ಹೇಳಿದ್ದಾರೆ.

ADVERTISEMENT

‘ಅಸ್ಸಾಂ ಒಪ್ಪಂದವು ಅಕ್ರಮ ವಲಸೆ ಸಮಸ್ಯೆಗೆ ಕಂಡುಕೊಂಡ ರಾಜಕೀಯ ಪರಿಹಾರವಾದರೆ, ಸೆಕ್ಷನ್‌ 6ಎ ಶಾಸನಾತ್ಮಕ ಪರಿಹಾರವಾಗಿದೆ’ ಎಂದು ಸಿಜೆಐ ಚಂದ್ರಚೂಡ್‌ ಹೇಳಿದರು.

‘ಇತರ ದೇಶಗಳಿಂದ ಭಾರತಕ್ಕೆ ವಲಸೆ ಬರುವುದನ್ನು ತಗ್ಗಿಸಬೇಕು ಹಾಗೂ ಅದಾಗಲೇ ವಲಸೆ ಬಂದಿರುವವರಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆ ಮಾಡುವ ಉದ್ಧೇಶದಿಂದ ಸೆಕ್ಷನ್‌ 6ಎ ಅನ್ನು ಸೇರಿಸಲಾಗಿದೆ’ ಎಂದು ತಾವೇ ಬರೆದ ತೀರ್ಪಿನಲ್ಲಿ ಸಿಜೆಐ ಹೇಳಿದ್ದಾರೆ.

ನ್ಯಾಯಮೂರ್ತಿಗಳಾದ ಸುಂದ್ರೇಶ್‌ ಹಾಗೂ ಮನೋಜ್ ಮಿಶ್ರಾ ಅವರು ಸಿಜೆಐ ಅವರ ಅಭಿಪ್ರಾಯವನ್ನು ಅನುಮೋದಿಸಿದ್ದಾರೆ. ‘ಸೆಕ್ಷನ್‌ 6ಎ’ ದ ಸಿಂಧುತ್ವ ಎತ್ತಿ ಹಿಡಿದಿದ್ದರೂ, ನ್ಯಾಯಮೂರ್ತಿ ಸೂರ್ಯಕಾಂತ್‌ ಪ್ರತ್ಯೇಕ ತೀರ್ಪು ಬರೆದಿದ್ದಾರೆ.

ಸ್ವಯಂ ಸೇವಾ ಸಂಸ್ಥೆಗಳಾದ ಅಸ್ಸಾಂ ಪಬ್ಲಿಕ್‌ ವರ್ಕ್ಸ್‌, ಅಸ್ಸಾಂ ಸನ್ಮಿಲಿತ ಮಹಾಸಂಘ ಹಾಗೂ ಇತರರು ಸೇರಿದಂತೆ 17 ಅರ್ಜಿಗಳನ್ನು ನ್ಯಾಯಪೀಠ ವಿಚಾರಣೆ ನಡೆಸಿ, ತೀರ್ಪು ನೀಡಿದೆ.

ಬಾಂಗ್ಲಾದೇಶ ಯುದ್ಧದ ಬಳಿಕ ಉದ್ಭವಿಸಿದ್ದ ಸನ್ನಿವೇಶ ಹಿನ್ನೆಲೆಯಲ್ಲಿ ಪೌರತ್ವ ಕಾಯ್ದೆಯ ಈ ಸೆಕ್ಷನ್‌ನ ಉದ್ದೇಶ ಅರ್ಥ ಮಾಡಿಕೊಳ್ಳಬೇಕು
ಡಿ.ವೈ.ಚಂದ್ರಚೂಡ್‌ ಮುಖ್ಯ ನ್ಯಾಯಮೂರ್ತಿ

ಏನಿದು ‘ಸೆಕ್ಷನ್‌6ಎ’

1966ರ ಜನವರಿ 1ರಿಂದ 1971ರ ಮಾರ್ಚ್‌ 25ರ ನಡುವೆ ಅಸ್ಸಾಂಗೆ ಬಂದಿರುವ ವಲಸಿಗರಿಗೆ ಕಾಯ್ದೆಯ ಈ ಸೆಕ್ಷನ್ ಭಾರತೀಯ ಪೌರತ್ವ ನೀಡಲು ಅವಕಾಶ ಕಲ್ಪಿಸುತ್ತದೆ. ವಿಶೇಷವಾಗಿ ಈ ಅವಧಿಯಲ್ಲಿ ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರಿಗೆ ಈ ಸೆಕ್ಷನ್‌ನ ಪ್ರಯೋಜನ ಸಿಗುತ್ತದೆ. ಆಗಿನ ಪ್ರಧಾನಿ ರಾಜೀವ್‌ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಪ್ರಫುಲ್ಲಕುಮಾರ್ ಮಹಂತ ನೇತೃತ್ವದ ಆಲ್‌ ಅಸ್ಸಾಂ ಸ್ಟುಡೆಂಟ್ಸ್‌ ಯೂನಿಯನ್ (ಎಎಎಸ್‌ಯು) ನಡುವೆ ಏರ್ಪಟ್ಟ ‘ಅಸ್ಸಾಂ ಒಪ್ಪಂದ’ದಂತೆ 1985ರಲ್ಲಿ ಈ ಅವಕಾಶವನ್ನು ಕಾಯ್ದೆಯಲ್ಲಿ ಸೇರ್ಪಡೆ ಮಾಡಲಾಗಿದೆ. ಅಸ್ಸಾಂ ಒಪ್ಪಂದದಲ್ಲಿ ವಿವರಿಸಿರುವಂತೆ ವಲಸಿಗರು ಎಂದು ಪರಿಗಣಿಸಲಾಗುವ ಜನರಿಗೆ ಈ ಸೆಕ್ಷನ್‌ನಡಿ ಪೌರತ್ವ ನೀಡಲಾಗುತ್ತದೆ.

ತೀರ್ಪಿನ ಪ್ರಮುಖ ಅಂಶಗಳು

  • ಪೌರತ್ವ ಕಾಯ್ದೆಯಲ್ಲಿ ಇಂತಹ ಅವಕಾಶ (ಸೆಕ್ಷನ್‌ 6ಎ) ಸೇರ್ಪಡೆ ಮಾಡುವುದಕ್ಕೆ ಸಂಸತ್‌ಗೆ ಶಾಸನಬದ್ಧ ಅಧಿಕಾರ ಇದೆ

  • ಅಸ್ಸಾಂ ಪ್ರವೇಶ ಮಾಡಿದ್ದನ್ನು ಗುರುತಿಸಲು ಹಾಗೂ ಪೌರತ್ವ ನೀಡುವುದಕ್ಕಾಗಿ 1971ರ ಮಾರ್ಚ್‌ 25 ಅನ್ನು ಕಟ್ಆಫ್‌ ದಿನಾಂಕ ಎಂದು ನಿರ್ಧರಿಸಿದ್ದು ಸರಿಯಾಗಿದೆ

  • ಒಂದು ರಾಜ್ಯದಲ್ಲಿ ವಿವಿಧ ಜನಾಂಗೀಯ ಗುಂಪುಗಳಿವೆ ಎಂದರೆ ಅದು ಸಂವಿಧಾನದ 29(1) ವಿಧಿ ಉಲ್ಲಂಘನೆಯಾಗುವುದಿಲ್ಲ 

  • ಅಕ್ರಮ ವಲಸೆಗೆ ಕಡಿವಾಣ ಹಾಕುವುದಕ್ಕೆ ಪ್ರಬಲ ನೀತಿ ರೂಪಿಸುವ ಅಗತ್ಯವಿದೆ

  • ಪೌರತ್ವ ಕಾಯ್ದೆಯ ಸೆಕ್ಷನ್‌ 6ಎ ಸೇರ್ಪಡೆಯು ಸಂವಿಧಾನದ 6 ಮತ್ತು 7ನೇ ವಿಧಿಯ ಉಲ್ಲಂಘನೆಯಾಗುವುದಿಲ್ಲ

  • ಮಾನವೀಯ ಕಳಕಳಿ ಹಾಗೂ ಸ್ಥಳೀಯ ಜನರ ರಕ್ಷಣೆಯಲ್ಲಿ ಸಮತೋಲನ ಕಾಯ್ದುಕೊಳ್ಳುವ ದೃಷ್ಟಿಯಿಂದ ಸೆಕ್ಷನ್‌ 6ಎ ಸೇರ್ಪಡೆ ಮಾಡಲಾಗಿದೆ

  • ಅಸ್ಸಾಂಗೆ ವಲಸೆ ಬಂದವರ ಸಂಖ್ಯೆ 40 ಲಕ್ಷ. ಪಶ್ಷಿಮ ಬಂಗಾಳ– 57 ಲಕ್ಷ ಮೇಘಾಲಯ–30 ಸಾವಿರ ಹಾಗೂ ತ್ರಿಪುರಾಕ್ಕೆ ಬಂದ ವಲಸಿಗರ ಸಂಖ್ಯೆ 3.25 ಲಕ್ಷ. ಆದರೆ ಪಶ್ಚಿಮ ಬಂಗಾಳಕ್ಕೆ ಹೋಲಿಸಿದರೆ ಅಸ್ಸಾಂನ ಜನಸಂಖ್ಯೆ ಹಾಗೂ ಭೂಪ್ರದೇಶ ಕಡಿಮೆ. ಹೀಗಾಗಿ ವಲಸಿಗರಿಂದಾಗಿ ಅಸ್ಸಾಂ ಹೆಚ್ಚು ಸಮಸ್ಯೆ ಎದುರಿಸಬೇಕಾಗುತ್ತದೆ

ದುರ್ಬಳಕೆ ಸಾಧ್ಯತೆ: ನ್ಯಾ.ಪಾರ್ದೀವಾಲಾ

‘ಸೆಕ್ಷನ್‌ 6ಎ ವಲಸಿಗರಿಗೆ ಪೌರತ್ವ ನೀಡುವ ಮುಕ್ತ ಅವಕಾಶ ನೀಡುತ್ತದೆ. ದಾಖಲೆಗಳನ್ನು ತಿರುಚಿ ಪೌರತ್ವ ಪಡೆಯಲು ಸಾಧ್ಯತೆಗಳಿರುವ ಕಾರಣ ಈ ಸೆಕ್ಷನ್‌ನ ದುರುಪಯೋಗವಾಗಲಿದೆ’ ಎಂದು ಭಿನ್ನ ತೀರ್ಪು ನೀಡಿರುವ ನ್ಯಾಯಮೂರ್ತಿ ಜೆ.ಬಿ.ಪಾರ್ದೀವಾಲಾ ಪ್ರತಿಪಾದಿಸಿದ್ದಾರೆ. ‘ಅಸ್ಸಾಂ ಪ್ರವೇಶಿಸಿದ್ದಕ್ಕೆ ಸಂಬಂಧಿಸಿ ತಪ್ಪು ದಿನಾಂಕ ನಮೂದು ಭ್ರಷ್ಟ ಅಧಿಕಾರಿಗಳಿಂದ ಸುಳ್ಳು ಮಾಹಿತಿಗಳನ್ನು ಒಳಗೊಂಡ ಸರ್ಕಾರಿ ದಾಖಲೆಗಳ ಸೃಷ್ಟಿ ವಂಶಾವಳಿ ಕುರಿತು ತಪ್ಪ ಮಾಹಿತಿ ನೀಡುವುದು ಸೇರಿದಂತೆ ವಿವಿಧ ರೀತಿಯ ನಕಲಿ ವಿವರಗಳನ್ನು ನೀಡಿ ಪೌರತ್ವ ಪಡೆಯುವುದಕ್ಕೆ ಈ ಸೆಕ್ಷನ್‌ ದಾರಿ ಮಾಡಿಕೊಡುತ್ತದೆ’ ಎಂದು 127 ಪುಟಗಳ ಪ್ರತ್ಯೇಕ ತೀರ್ಪಿನಲ್ಲಿ ಹೇಳಿದ್ದಾರೆ. ‘ನಕಲಿ ದಾಖಲೆಗಳ ಸೃಷ್ಟಿ ಸಾಧ್ಯವಿರುವುದರಿಂದ ಅಸ್ಸಾಂನತ್ತ ಮತ್ತಷ್ಟು ವಲಸೆಗೆ ಈ ಸೆಕ್ಷನ್‌ ಉತ್ತೇಜನ ನೀಡುತ್ತದೆ. ವರ್ಷಗಳು ಕಳೆದಂತೆ ಸರ್ಕಾರದ ಬಳಿ ದಾಖಲೆಗಳು ಹಾನಿಗೆ ಒಳಗಾಗುತ್ತವೆ ಇಲ್ಲವೇ ನಾಶವಾಗುತ್ತವೆ. ಇದರಿಂದ ವಲಸಿಗರು ಅಸ್ಸಾಂ ಪ್ರವೇಶ ಮಾಡಿರುವ ಕುರಿತ ದಿನಾಂಕ ಮತ್ತಿತರ ವಿವರಗಳ ಪರಾಮರ್ಶೆ ಕಷ್ಟವಾಗುತ್ತದೆ’ ಎಂದೂ ಪ್ರತಿಪಾದಿಸಿದ್ದಾರೆ.

ಎಎಎಸ್‌ಯು ಸ್ವಾಗತ;ಎಎಸ್‌ಎಂ ಅಸಮಾಧಾನ

ಪೌರತ್ವ ಕಾಯ್ದೆಯ ಸೆಕ್ಷನ್‌ 6ಎ ಹಾಗೂ ಕಟ್‌ ಆಫ್‌ ದಿನಾಂಕ ನಿಗದಿ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿಗೆ ಗುರುವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಲ್‌ ಅಸ್ಸಾಂ ಸ್ಟುಡೆಂಟ್ಸ್‌ ಯೂನಿಯನ್‌ (ಎಎಎಸ್‌ಯು) ಆಲ್‌ ಅಸ್ಸಾಂ ಮೈನಾರಿಟಿ ಸ್ಟುಡೆಂಟ್ಸ್‌ ಯೂನಿಯನ್ (ಎಎಎಂಎಸ್‌ಯು) ಎಐಯುಡಿಎಫ್‌ ಎಜೆಪಿ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಟಿಎಂಸಿ ತೀರ್ಪನ್ನು ಸ್ವಾಗತಿಸಿವೆ.  ಅಸ್ಸಾಂನ ಆಡಳಿತಾರೂಢ ಪಕ್ಷ ಬಿಜೆಪಿ ಈ ವಿಚಾರವಾಗಿ ಎಚ್ಚರಿಕೆ ಹೆಜ್ಜೆಯನ್ನಿಡಲು ಮುಂದಾಗಿದೆ. ‘ಅಸ್ಸಾಂನ ಮೂಲನಿವಾಸಿಗಳ ಹಿತರಕ್ಷಣೆ ಮುಖ್ಯ. ಈ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಚಿಂತನೆ ನಡೆಸಲಾಗುವುದು’ ಎಂದು ಬಿಜೆಪಿ ಮುಖಂಡ ಹಾಗೂ ಸಚಿವ ಜಯಂತ ಮಲ್ಲ ಬರುವಾ ಹೇಳಿದ್ದಾರೆ. ‘ಸುಪ್ರೀಂ ಕೋರ್ಟ್‌ನ ಈ ತೀರ್ಪು ಐತಿಹಾಸಿಕ ಅಸ್ಸಾಂ ಒಪ್ಪಂದ ಏರ್ಪಡಲು ಹಿಂದಿರುವ ತರ್ಕವನ್ನು ಮರುಸ್ಥಾಪನೆ ಮಾಡಿದಂತಾಗಿದೆ’ ಎಂದಿರುವ ಎಎಎಸ್‌ಯು ‘ಸರ್ಕಾರ ತಕ್ಷಣವೇ ಈ ಒಪ್ಪಂದವನ್ನು ಅನುಷ್ಠಾನಗೊಳಿಸಬೇಕು’ ಎಂದು ಒತ್ತಾಯಿಸಿದೆ. ‘ಸುಪ್ರೀಂ ಕೋರ್ಟ್‌ ತೀರ್ಪು ದುರದೃಷ್ಟಕರ’ ಎಂದು ಮೂಲ ಅರ್ಜಿದಾರ ಸಂಸ್ಥೆಯಾದ ಅಸ್ಸಾಂ ಸನ್ಮಿಲಿತ ಮಹಾಸಂಘ (ಎಎಸ್‌ಎಂ) ಹೇಳಿದೆ.  ‘ಈ ತೀರ್ಪಿನಿಂದಾಗಿ ಅಸ್ಸಾಂ ರಾಜ್ಯವು ಅಕ್ರಮ ವಲಸಿಗರ ತಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.