ADVERTISEMENT

Article 370 Verdict | ಐತಿಹಾಸಿಕ ತೀರ್ಪು: ಮೋದಿ, ಶಾ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 16:04 IST
Last Updated 11 ಡಿಸೆಂಬರ್ 2023, 16:04 IST
ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ
ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದು‍ಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿರುವುದು ‘ಐತಿಹಾಸಿಕ’ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಬಣ್ಣಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಹಾಗೂ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಈ ತೀರ್ಪನ್ನು ಸ್ವಾಗತಿಸಿವೆ. ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಪಕ್ಷಗಳ ಮುಖಂಡರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ಸುಪ್ರೀಂ ಕೋರ್ಟ್‌ ತೀರ್ಪು ಕೇವಲ ಕಾನೂನಿಗೆ ಸಂಬಂಧಿಸಿದ ತೀರ್ಪು ಮಾತ್ರವಲ್ಲ. ಇದು ಭರವಸೆಯ ಬೆಳಕು’ ಎಂದು ಮೋದಿ ತಮ್ಮ ‘ಎಕ್ಸ್‌’ ಖಾತೆಯಲ್ಲಿ ‘ನವ ಜಮ್ಮು ಮತ್ತು ಕಾಶ್ಮೀರ’ ಎಂಬ ಹ್ಯಾಷ್‌ಟ್ಯಾಗ್‌ನಡಿ ಪ್ರತಿಕ್ರಿಯಿಸಿದ್ದಾರೆ. 

ADVERTISEMENT

‘2019ರ ಆಗಸ್ಟ್ 5ರಂದು ಸಂಸತ್ತು ತೆಗೆದುಕೊಂಡ ನಿರ್ಧಾರವನ್ನು ಈ ತೀರ್ಪು ಎತ್ತಿಹಿಡಿದಿದೆ. ಇದು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನಲ್ಲಿರುವ ನಮ್ಮ ಸಹೋದರ, ಸಹೋದರಿಯರಿಗೆ ಭರವಸೆ, ಪ್ರಗತಿ ಮತ್ತು ಏಕತೆಯನ್ನು ಸಾರುವ ಘೋಷಣೆಯಾಗಿದೆ. ಜಮ್ಮು ಮತ್ತು ಕಾಶ್ಮೀರದ ಜನರ ಆಶೋತ್ತರಗಳನ್ನು ನನಸಾಗಿಸುವ ನಮ್ಮ ಬದ್ಧತೆ ಅಚಲ ಎಂಬ ಭರವಸೆ ನೀಡುತ್ತಿದ್ದೇನೆ‘ ಎಂದಿದ್ದಾರೆ.

370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದು‍ಪಡಿಸುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದ ಅಮಿತ್‌ ಶಾ, ‘ನಾವು ತೆಗೆದುಕೊಂಡಿದ್ಧ ನಿರ್ಧಾರ ಸಂಪೂರ್ಣವಾಗಿ ಸಾಂವಿಧಾನಿಕ ಎಂಬುದು ಸಾಬೀತಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಪ್ರಧಾನಿ ಮೋದಿ ಅವರು ಐದು ವರ್ಷಗಳ ಹಿಂದೆ ತೆಗೆದುಕೊಂಡಿದ್ದ ದೂರದೃಷ್ಟಿಯ ನಿರ್ಧಾರವು ಕಣಿವೆ ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ನೆರವಾಗಿದೆ. ಒಂದು ಕಾಲದಲ್ಲಿ ಹಿಂಸೆಯಿಂದ ನಲುಗಿದ್ದ ರಾಜ್ಯದಲ್ಲಿ ಬೆಳವಣಿಗೆ ಮತ್ತು ಅಭಿವೃದ್ಧಿಯ ಹೊಸ ಶಕೆಗೆ ನಾಂದಿ ಹಾಡಿದೆ’ ಎಂದು ಹೇಳಿದ್ದಾರೆ.

‘ವಿಶೇಷ ಸ್ಥಾನಮಾನ ರದ್ದುಗೊಂಡ ನಂತರ ಈ ರಾಜ್ಯವು ಪ್ರವಾಸೋದ್ಯಮ ಮತ್ತು ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿದ್ದು, ಜನರ ಜೀವನಮಟ್ಟ ಸುಧಾರಿಸಿದೆ. ಬಡವರು ಹಾಗೂ ಶೋಷಿತರ ಹಕ್ಕುಗಳು ಮರುಸ್ಥಾಪನೆಯಾಗಿದೆ. ಪ್ರತ್ಯೇಕತಾವಾದ ಮತ್ತು ಕಲ್ಲು ತೂರಾಟವು ಇತಿಹಾಸದ ಪುಟಗಳನ್ನು ಸೇರಿದೆ’ ಎಂದಿದ್ದಾರೆ.

ಆರ್‌ಎಸ್‌ಎಸ್‌ ಸ್ವಾಗತ: ಸುಪ್ರೀಂ ಕೋರ್ಟ್‌ ತೀರ್ಪನ್ನು ಆರ್‌ಎಸ್‌ಎಸ್‌ ಸ್ವಾಗತಿಸಿದ್ದು, ‘ದೇಶದ ಏಕತೆಯನ್ನು ಇನ್ನಷ್ಟು ಬಲಪಡಿಸುತ್ತದೆ’ ಎಂದಿದೆ. 

‘ಆರ್‌ಎಸ್‌ಎಸ್‌ ಈ ತೀರ್ಪನ್ನು ಸ್ವಾಗತಿಸುತ್ತದೆ. ವಿಶೇಷ ಸ್ಥಾನಮಾನ ರದ್ದುಪಡಿಸುವಂತೆ ಸಂಘವು ಹಲವು ನಿರ್ಣಯಗಳನ್ನು ತೆಗೆದುಕೊಂಡಿದೆ ಮಾತ್ರವಲ್ಲ, ಸಾಕಷ್ಟು ಹೋರಾಟಗಳಲ್ಲೂ ಪಾಲ್ಗೊಂಡಿದೆ. ಹಲವು ವರ್ಷಗಳಿಂದ ಅನ್ಯಾಯಕ್ಕೆ ಗುರಿಯಾಗಿದ್ದ ಜಮ್ಮು ಮತ್ತು ಕಾಶ್ಮೀರದ ಜನರು ಇದೀಗ ನಿರಾಳರಾಗಿದ್ದಾರೆ’ ‌‌ಎಂದು ಸಂಘದ ಅಖಿಲ ಭಾರತ ಪ್ರಚಾರ ಪ್ರಮುಖ ಸುನಿಲ್‌ ಅಂಬೇಕರ್‌ ತಿಳಿಸಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಈಗ ನಮ್ಮ ಮುಂದೆ ಬಾಕಿಯಿರುವ ಗುರಿಯೆಂದರೆ ಪಾಕ್‌ ಆಕ್ರಮಿಕ ಕಾಶ್ಮೀರದ (ಪಿಒಕೆ) ವಿಮೋಚನೆ. ಬಲಿಷ್ಠ ಭಾರತ ಮತ್ತು ದೃಢನಿಶ್ಚಯ ಹೊಂದಿರುವ ಸರ್ಕಾರದಿಂದ ಪಿಒಕೆ ವಿಮೋಚನೆ ಸಾಧ್ಯ ಎಂಬ ವಿಶ್ವಾಸ ನಮ್ಮದು’ ಎಂದು ವಿಎಚ್‌ಪಿ ಕಾರ್ಯಾಧ್ಯಕ್ಷ ಅಲೋಕ್‌ ಕುಮಾರ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.