ಲಖನೌ: ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಕೇಂದ್ರದ ಕ್ರಮವನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವಾಗತಿಸಿದ್ದಾರೆ. ‘ಏಕ್ ಭಾರತ್, ಶ್ರೇಷ್ಠ್ ಭಾರತ್‘ ಎಂಬ ಪರಿಕಲ್ಪನೆಗೆ ಇನ್ನಷ್ಟು ಬಲ ತುಂಬಿದೆ ಎಂದಿದ್ದಾರೆ.
ಮೈಕ್ರೊ ಬ್ಲಾಗಿಂಗ್ ತಾಣ ಎಕ್ಸ್‌ನ ತಮ್ಮ ಖಾತೆಯಲ್ಲಿ ಈ ವಿಷಯ ಹಂಚಿಕೊಂಡಿರುವ ಅವರು, ‘ಸಂವಿಧಾನದ 370ನೇ ಹಾಗೂ 35ಎ ವಿಧಿ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಶ್ಲಾಘನೀಯ. ಇದರಿಂದ ಒಂದು ಭಾರತ, ಭವ್ಯ ಭಾರತ ಎಂಬ ಹೇಳಿಕೆಯ ಆತ್ಮಕ್ಕೆ ಇನ್ನಷ್ಟು ಪುಷ್ಟಿ ಸಿಕ್ಕಂತಾಗಿದೆ’ ಎಂದಿದ್ದಾರೆ.
‘ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಂದಿಗೆ ಜೋಡಿಸುವ ಮೂಲಕ ದೇಶದ ಮುಖ್ಯವಾಹಿನಿಗೆ ತಂದ ಪ್ರಧಾನಿ ನರೇಂದ್ರ ಮೋದಿ ಅವರ ರಾಷ್ಟ್ರ ಮೊದಲು ಎಂಬ ಪರಿಕಲ್ಪನೆಗೆ ಉತ್ತರ ಪ್ರದೇಶದ 25 ಕೋಟಿ ಜನರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಪ್ರಧಾನಿ ಮೋದಿ ಅವರ ಯಶಸ್ವಿ ನಾಯಕತ್ವದಡಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನಲ್ಲಿ ಅತ್ಯುತ್ತಮ ಆಡಳಿತ ಸಿಗಲಿದೆ’ ಎಂದು ಅವರು ಆಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.