ADVERTISEMENT

ಕೇಜ್ರಿವಾಲ್ ಬಂಧನಕ್ಕೆ ಖಂಡನೆ: ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಪಿಟಿಐ
Published 22 ಮಾರ್ಚ್ 2024, 3:16 IST
Last Updated 22 ಮಾರ್ಚ್ 2024, 3:16 IST
   

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನ ಖಂಡಿಸಿ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮುಂಬರುವ ಚುನಾವಣಾ ಫಲಿತಾಂಶದ ಬಗ್ಗೆ ಭಯಗೊಂಡಿರುವ ಬಿಜೆಪಿ ಪ್ರತಿಪಕ್ಷಗಳಿಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

'ದುರಹಂಕಾರಿ ಭಾರತೀಯ ಜನತಾ ಪಕ್ಷ ಪ್ರತಿದಿನ ಚುನಾವಣೆಗಾಗಿ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ಜತೆಗೆ ಕಾನೂನುಬಾಹಿರ ವಿಧಾನಗಳಿಂದ ಪ್ರತಿಪಕ್ಷಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

'ನಿಜವಾದ ಗೆಲುವಿನ ವಿಶ್ವಾಸವಿದ್ದರೆ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಪಕ್ಷದ ಖಾತೆಗಳನ್ನು ಸ್ಥಗಿತಗೊಳಿಸುತ್ತಿರಲಿಲ್ಲ. ಚುನಾವಣೆಗೆ ಮುನ್ನ ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಳ್ಳುತ್ತಿರಲಿಲ್ಲ' ಎಂದು ಅವರು ಕಿಡಿಕಾರಿದ್ದಾರೆ.

ADVERTISEMENT

ಇಂಡಿಯಾದಿಂದ ತಕ್ಕ ಪ್ರತ್ಯುತ್ತರ:

'ಭಯಭೀತನಾದ ಸರ್ವಾಧಿಕಾರಿ ಜಡ ಪ್ರಜಾಪ್ರಭುತ್ವವನ್ನು ರಚಿಸಲು ಬಯಸುತ್ತಾನೆ. ಇದಕ್ಕೆ ಇಂಡಿಯಾ ಮೈತ್ರಿ ಕೂಟ ತಕ್ಕ ಪ್ರತ್ಯುತ್ತರ ನೀಡಲಿದೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

'ಮಾಧ್ಯಮ ಸೇರಿದಂತೆ ಎಲ್ಲ ಸಂಸ್ಥೆಗಳನ್ನು ವಶಪಡಿಸಿಕೊಳ್ಳುವುದು, ಪಕ್ಷಗಳನ್ನು ಒಡೆಯುವುದು, ಕಂಪನಿಗಳಿಂದ ಹಣ ವಸೂಲಿ ಮಾಡುವುದು, ಪ್ರಮುಖ ವಿರೋಧ ಪಕ್ಷದ ಖಾತೆಗಳನ್ನು ಸ್ಥಗಿತಗೊಳಿಸುವುದು ಈ ಪಿಶಾಚಿ ಶಕ್ತಿಗೆ ಸಾಕಾಗಲಿಲ್ಲ. ಆದರೆ ಈಗ ಮುಖ್ಯಮಂತ್ರಿಗಳ ಬಂಧನವೂ ಸಾಮಾನ್ಯವಾಗಿದೆ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಸಾಂವಿಧಾನಿಕ ಕ್ರಮ:

'ಚುನಾವಣೆಯ ಕಾರಣದಿಂದಾಗಿ ಅರವಿಂದ್ ಕೇಜ್ರಿವಾಲ್ ಅವರನ್ನು ಈ ರೀತಿ ಗುರಿಯಾಗಿಸಿದ್ದಾರೆ. ಇ.ಡಿ ಕ್ರಮ ತಪ್ಪು ಮತ್ತು ಅಸಂವಿಧಾನಿಕ' ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

'ಚುನಾವಣಾ ಕದನದಲ್ಲಿ ನಿಮ್ಮ ಟೀಕಾಕಾರರ ವಿರುದ್ಧ ಹೋರಾಡಿ, ಅವರನ್ನು ದಿಟ್ಟತನದಿಂದ ಎದುರಿಸಿ. ಎದುರಾಳಿಗಳ ನೀತಿಗಳು ಮತ್ತು ಕಾರ್ಯಶೈಲಿಯ ಮೇಲೆ ಮಾತನಾಡಿ. ಇದು ಪ್ರಜಾಪ್ರಭುತ್ವ. ಆದರೆ ತನಿಖಾ ಸಂಸ್ಥೆಗಳ ಅಧಿಕಾರವನ್ನು ಬಳಸಿಕೊಂಡು ತನ್ನ ರಾಜಕೀಯ ಉದ್ದೇಶವನ್ನು ಈಡೇರಿಸಿಕೊಳ್ಳುವುದು ಪ್ರಜಾಪ್ರಭುತ್ವದ ತತ್ವಕ್ಕೆ ವಿರುದ್ಧವಾಗಿದೆ' ಎಂದು ಪ್ರಿಯಾಂಕಾ ಗಾಂಧಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

'ದೇಶದ ಅತಿ ದೊಡ್ಡ ವಿರೋಧ ಪಕ್ಷ ಕಾಂಗ್ರೆಸ್‌ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಹಗಲು ರಾತ್ರಿ ಇಡಿ, ಸಿಬಿಐ ಹಾಗೂ ಐಟಿ ದಾಳಿಯ ಭೀತಿಯಲ್ಲಿದ್ದಾರೆ. ಸದ್ಯ ಒಬ್ಬ ಮುಖ್ಯಮಂತ್ರಿಯನ್ನು ಜೈಲಿಗೆ ಹಾಕಲಾಗಿದೆ. ಈಗ ಇನ್ನೊಬ್ಬ ಮುಖ್ಯಮಂತ್ರಿಯನ್ನು ಜೈಲಿಗೆ ಕಳುಹಿಸಲು ಸಿದ್ಧತೆ ನಡೆಸಲಾಗುತ್ತಿದೆ. ಇಂತಹ ನಾಚಿಕೆಗೇಡಿನ ಸಂಗತಿ ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲು' ಎಂದು ಅವರು ದೂರಿದ್ದಾರೆ.

ಅಬಕಾರಿ ನೀತಿ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಗುರುವಾರ ಬಂಧಿಸಿದೆ. ಲೋಕಸಭೆ ಚುನಾವಣೆಗೆ ಮುನ್ನ ಕೇಜ್ರಿವಾಲ್ ಬಂಧನದ ಹಿಂದೆ ದೊಡ್ಡ ಪಿತೂರಿ ಇದೆ ಎಂದು ಎಎಪಿ ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.