ನವದೆಹಲಿ (ಪಿಟಿಐ): ನ್ಯಾಯಾಲಯಗಳಲ್ಲಿ ಇರಿಸುವ ನ್ಯಾಯದೇವತೆಯ ವಿಗ್ರಹದಲ್ಲಿ ಹಾಗೂ ಸುಪ್ರೀಂ ಕೋರ್ಟ್‌ನ ಲಾಂಛನದಲ್ಲಿ ಬದಲಾವಣೆಗಳನ್ನು ವಕೀಲರ ಸಂಘಟನೆಗಳ ಜೊತೆ ಸಮಾಲೋಚನೆ ನಡೆಸದೆಯೇ ತಂದಿರುವುದಕ್ಕೆ ಸುಪ್ರೀಂ ಕೋರ್ಟ್ ವಕೀಲರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಗ್ರಂಥಾಲಯದಲ್ಲಿ ನ್ಯಾಯದೇವತೆಯ ಹೊಸ ವಿಗ್ರಹವನ್ನು ಇರಿಸಲಾಗಿದೆ. ಆರು ಅಡಿ ಎತ್ತರದ ಈ ವಿಗ್ರಹವು ಒಂದು ಕೈಯಲ್ಲಿ ತಕ್ಕಡಿಯನ್ನು, ಇನ್ನೊಂದು ಕೈಯಲ್ಲಿ ಕತ್ತಿಯ ಬದಲು ಸಂವಿಧಾನದ ಪ್ರತಿಯನ್ನು ಹಿಡಿದಿದೆ.
ನ್ಯಾಯದೇವತೆಯ ವಿಗ್ರಹದ ಕಣ್ಣಿಗೆ ಪಟ್ಟಿ ಇಲ್ಲ. ಆಕೆಯ ಶಿರಭಾಗದಲ್ಲಿ ಕಿರೀಟ ಇದೆ.
‘ಲಾಂಛನದಲ್ಲಿ, ನ್ಯಾಯದೇವತೆ ವಿಗ್ರಹದಲ್ಲಿ ಮಹತ್ವದ ಬದಲಾವಣೆಗಳನ್ನು ಸುಪ್ರೀಂ ಕೋರ್ಟ್ ಏಕಪಕ್ಷೀಯವಾಗಿ ತಂದಿದೆ. ನ್ಯಾಯದಾನದಲ್ಲಿ ನಾವು ಸಮಾನ ಪಾಲುದಾರರು. ಆದರೆ ಈ ಬದಲಾವಣೆಗಳನ್ನು ನಮ್ಮ ಗಮನಕ್ಕೆ ತಂದಿರಲಿಲ್ಲ. ಬದಲಾವಣೆಗಳ ಹಿಂದಿನ ತರ್ಕ ಏನು ಎಂಬುದು ನಮಗೆ ಗೊತ್ತಾಗಿಲ್ಲ’ ಎಂದು ಸುಪ್ರೀಂ ಕೋರ್ಟ್‌ನ ವಕೀಲರ ಸಂಘದ (ಎಸ್‌ಸಿಬಿಎ) ಅಧ್ಯಕ್ಷ ಕಪಿಲ್ ಸಿಬಲ್ ಮತ್ತು ಕಾರ್ಯಕಾರಿ ಸಮಿತಿಯ ಇತರರು ಸಹಿ ಮಾಡಿರುವ ನಿರ್ಣಯದಲ್ಲಿ ಹೇಳಲಾಗಿದೆ.
ವಕೀಲರ ಸಂಘವು ಕೆಫೆ ಹಾಗೂ ಮೊಗಸಾಲೆಯನ್ನು ನಿರ್ಮಿಸಲು ಕೋರಿದ್ದ ಸ್ಥಳದಲ್ಲಿ ವಸ್ತುಸಂಗ್ರಹಾಲಯ ನಿರ್ಮಾಣಕ್ಕೆ ತೀರ್ಮಾನಿಸಿರುವುದನ್ನು ಕೂಡ ಸಂಘವು ವಿರೋಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.