ನವದೆಹಲಿ: ರಾಜ್ಯದ ವಿವಿಧೆಡೆ ಇರುವ ‘ತಳವಾರ’, ‘ಪರಿವಾರ’ ಮತ್ತು ‘ಸಿದ್ದಿ’ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂವಿಧಾನದ (ಪರಿಶಿಷ್ಟ ಪಂಗಡ) ಆದೇಶ (2ನೇ ತಿದ್ದುಪಡಿ) ಮಸೂದೆಗೆ ಗುರುವಾರ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆಯಿತು.
ರಾಜ್ಯದ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಸಿದ್ದಿ ಸಮುದಾಯ, ಕರ್ನಾಟಕದ ಉತ್ತರ ಮತ್ತು ದಕ್ಷಿಣ ಭಾಗದಲ್ಲಿರುವ ‘ತಳವಾರ’, ‘ಪರಿವಾರ’ ಸಮುದಾಯದವರಿಗೆ ಪರಿಶಿಷ್ಟ ಪಂಗಡದ ಸೌಲಭ್ಯಗಳು ದೊರೆಯಲು ಈ ಮಸೂದೆ ನೆರವಾಗಲಿದೆ.
ಬುಡಕಟ್ಟು ವ್ಯವಹಾರಗಳ ಖಾತೆ ರಾಜ್ಯ ಸಚಿವೆ ರೇಣುಕಾ ಸಿಂಗ್ ಸರುತಾ ಮಸೂದೆ ಮಂಡಿಸಿದರು. ವಿರೋಧ ಪಕ್ಷಗಳ ಸದಸ್ಯರು ಮಸೂದೆಯನ್ನು ಸ್ವಾಗತಿಸಿದರು.
ಚಳಿಗಾಲದ ಅಧಿವೇಶನವು ಶುಕ್ರವಾರ ಕೊನೆಗೊಳ್ಳಲಿದ್ದು, ಲೋಕಸಭೆಯಲ್ಲಿ ಈ ಮಸೂದೆಯು ಬಜೆಟ್ ಅಧಿವೇಶನದಲ್ಲಿಯೇ ಮಂಡನೆಯಾಗುವ ಸಾಧ್ಯತೆ ಇದೆ. ಲೋಕಸಭೆಯ ಅಂಗೀಕಾರ ದೊರೆತ ನಂತರವಷ್ಟೇ ಈ ಸಮುದಾಯಗಳಿಗೆ ಅನುಕೂಲ ಆಗಲಿದೆ.
ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ಈ ಮೂರೂ ಸಮುದಾಯದವರು ಸಲ್ಲಿಸಿದ್ದ ಬೇಡಿಕೆ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಇದೀಗ ಅವರ ಬೇಡಿಕೆ ಈಡೇರುತ್ತಿರುವುದು ಅಭಿನಂದನೀಯ ಎಂದು ಬಿಜೆಪಿಯ ಕೆ.ಸಿ. ರಾಮಮೂರ್ತಿ, ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್ ಹೇಳಿದರು.
ಕೊಡಗಿನ ಕೊಡವ ಸಮುದಾಯ, ಉತ್ತರ ಕರ್ನಾಟಕದಲ್ಲಿರುವ ಹಲಬರ, ಗೋಂದಳಿ, ಗೊಲ್ಲ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ಜೆಡಿಎಸ್‌ನ ಡಿ.ಕುಪೇಂದ್ರ ರೆಡ್ಡಿ ಹಾಗೂ ಬಿಜೆಪಿಯ ಪ್ರಭಾಕರ ಕೋರೆ ಕೋರಿದರು.
ಈ ಮೂರೂ ಸಮುದಾಯಗಳಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ತಿದ್ದುಪಡಿಗೆ ಕೋರಿ ಕರ್ನಾಟಕ ಸರ್ಕಾರ ಶಿಫಾರಸು ಮಾಡಿತ್ತು. ಮೈಸೂರು ಸಂಸದ ಪ್ರತಾಪಸಿಂಹ ಅವರು ಸಮೀಕ್ಷೆ ನಡೆಸುವ ಮೂಲಕ ಸಂಗ್ರಹಿಸಿದ್ದ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಗಮನ ಸೆಳೆದಿದ್ದರು ಎಂದು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ಅತ್ಯಂತ ಹಿಂದುಳಿದಿರುವ ಈ ಸಮುದಾಯಗಳ ಜನರು ಇದುವರೆಗೆ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಆಗದೆ ಸೌಲಭ್ಯಗಳಿಂದ ವಂಚಿತರಾಗಿದ್ದರು ಎಂದು ಅವರು ಹೇಳಿದರು.
ಒಡಿಶಾ, ತಮಿಳುನಾಡು, ತೆಲಂಗಾಣ, ಬಿಹಾರ, ಉತ್ತರ ಪ್ರದೇಶದ ಸದಸ್ಯರೂ ಆಯಾ ರಾಜ್ಯಗಳಲ್ಲಿ ಭಿನ್ನ ಹೆಸರಿನಿಂದ ಕರೆಯಲಾಗುವ ಹಿಂದುಳಿದಿರುವ ಬುಡಕಟ್ಟು ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ಮಸೂದೆ ಮೇಲಿನ ಚರ್ಚೆಯ ವೇಳೆ ಮನವಿ ಮಾಡಿದರು.
ರಾಜ್ಯದಲ್ಲಿ ‘ನಾಯಕ’, ‘ವಾಲ್ಮೀಕಿ’, ‘ಬೇಡ’ ಮತ್ತಿತರ ಹೆಸರುಗಳಿಂದ ಗುರುತಿಸಿಕೊಂಡಿರುವ ಸಮುದಾಯವನ್ನು ಕೇಂದ್ರ ಸರ್ಕಾರ 1991ರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.