ADVERTISEMENT

ಪ್ರವಾಹದಿಂದ ತತ್ತರಿಸಿದ ಕೇರಳ ಶಾಲೆಗಳು ಮತ್ತೆ ಆರಂಭ

ಓಣಂ ರಜೆ ಮುಂದಕ್ಕೆ

ಪಿಟಿಐ
Published 29 ಆಗಸ್ಟ್ 2018, 10:04 IST
Last Updated 29 ಆಗಸ್ಟ್ 2018, 10:04 IST
ಪ್ರವಾಹದ ನೀರಿನಿಂದ ಹಾಳಾಗಿದ್ದ ಪುಸ್ತಕಗಳನ್ನು ಒಣಗಿಸಿಕೊಳ್ಳುತ್ತಿರುವ ಬಾಲಕ
ಪ್ರವಾಹದ ನೀರಿನಿಂದ ಹಾಳಾಗಿದ್ದ ಪುಸ್ತಕಗಳನ್ನು ಒಣಗಿಸಿಕೊಳ್ಳುತ್ತಿರುವ ಬಾಲಕ   

ತಿರುವನಂತಪುರ: ಭಾರಿ ಮಳೆ ಮತ್ತು ಪ್ರವಾಹದಿಂದ ತತ್ತರಿಸಿದ್ದ ಕೇರಳದಲ್ಲಿ ಶಾಲೆಗಳು ಬುಧವಾರ ‍ಪುನರಾರಂಭವಾದವು. ರಾಜ್ಯದ ಹಲವು ಭಾಗದಲ್ಲಿ ಮಳೆ ಸಂಬಂಧಿ ಅನಾಹುತಗಳಲ್ಲಿ ಈವರೆಗೆ ಒಟ್ಟು 474 ಜನರು ಮೃತಪಟ್ಟಿದ್ದಾರೆ.

ಮಳೆ ಮತ್ತು ಪ್ರವಾಹದಿಂದ ಓಣಂ ರಜೆಯನ್ನು ಮುಂದಕ್ಕೆ ಹಾಕಲಾಗಿದೆ. 10 ಲಕ್ಷಕ್ಕೂ ಹೆಚ್ಚು ಜನರು ಮನೆಗಳನ್ನು ಕಳೆದುಕೊಂಡು ನಿರ್ವಸತಿಗರಾಗಿದ್ದು ಅವರಿಗೆಲ್ಲ ತಾತ್ಕಾಲಿಕ ಆಶ್ರಯ ಕೇಂದ್ರಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಶಾಲೆ ಮತ್ತು ಕಾಲೇಜುಗಳನ್ನು ಪುನರ್ವಸತಿ ಕೇಂದ್ರಗಳಾಗಿ ಮಾಡಲಾಗಿದೆ.

ಭಾರಿ ಪ್ರವಾಹದಿಂದ ಶಾಲಾ ಕೊಠಡಿಗಳಿಗೂ ನೀರುನುಗ್ಗಿದ್ದು, ಪುಸ್ತಕ ಮತ್ತು ಪೀಠೋಪಕರಣಗಳಿಗೆ ಹಾನಿಯಾಗಿದೆ. ಕೊಠಡಿಗಳನ್ನು ಸ್ವಚ್ಛಗೊಳಿಸಲಾಗಿದ್ದು, ನೈರ್ಮಲ್ಯ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ.

ADVERTISEMENT

ಬುಧವಾರ ಶಾಲೆ ಆರಂಭವಾಗುತ್ತಿದ್ದಂತೆ ಶಿಕ್ಷಕರು ಮಕ್ಕಳನ್ನು ಸ್ವಾಗತಿಸಿದರು. ಈ ಮಕ್ಕಳಲ್ಲಿ ಹಲವರ ಮನೆಗಳಿಗೂ ಪ್ರವಾಹದಿಂದ ಹಾನಿಯಾಗಿದೆ. ಶಾಲೆಗಳಲ್ಲಿ ಸಣ್ಣ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಸಿಹಿ ಹಂಚಿ ಮಕ್ಕಳು ಅಧ್ಯಯನದ ಕಡೆಗೆ ಆಸಕ್ತಿವಹಿಸುವಂತೆ ಮಾಡಲಾಯಿತು.

‘ಪ್ರವಾಹದಿಂದ ಕೇರಳದಲ್ಲಿ ಕನಿಷ್ಠ 650 ಶಾಲೆಗಳಿಗೆ ಹಾನಿಯಾಗಿದೆ. ಕೆಲವು ಪ್ರದೇಶಗಳಲ್ಲಿ ಶಾಲೆಗಳೂ ಇನ್ನೂ ಆರಂಭವಾಗಿಲ್ಲ. ಇವುಗಳಲ್ಲಿ ಮನೆ ಕಳೆದುಕೊಂಡವರು ನೆಲೆ ಒದಗಿಸಲಾಗಿದೆ. ಸೆಪ್ಟೆಂಬರ್ 3 ರ ವೇಳೆಗೆ ಎಲ್ಲಾ ಶಾಲೆಗಳು ಪುನರಾರಂಭವಾಗಲಿವೆ’ ಎಂದು ಶಿಕ್ಷಣ ಸಚಿವ ಪ್ರೊ. ಸಿ.ರವೀಂದ್ರನಾಥ್‌ ಅವರು ಹೇಳಿದ್ದಾರೆ.

ಹೊಸ ಸಮವಸ್ತ್ರ: ಮಳೆ ಮತ್ತು ಪ್ರವಾಹದಿಂದ ಪುಸ್ತಕ ಮತ್ತು ಸಮವಸ್ತ್ರ ಕಳೆದುಕೊಂಡ ಮಕ್ಕಳಿಗೆ ಹೊಸದಾಗಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ. ಮಕ್ಕಳಿಗೆ ಮುಂದಿನ ದಿನಗಳು ಶುಭವಾಗಿರಲಿ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಕೇರಳದಲ್ಲಿ ಒಟ್ಟು 1.97 ಲಕ್ಷ ಮಂದಿ ಪರಿಹಾರ ಶಿಬಿರಗಳಲ್ಲಿ ಉಳಿದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.