ADVERTISEMENT

15 ಸಾವಿರ ಭಾರತೀಯರ ವಂಶವಾಹಿ ದತ್ತಾಂಶ ವಿಶ್ಲೇಷಣೆ

ಅಮೆರಿಕ, ಸಿಂಗಪುರದ 2 ಬಯೊಮೆಡಿಕಲ್‌ ಕಂಪನಿಗಳಿಂದ ಬೃಹತ್ ಹಗರಣ: ತನಿಖೆಗೆ ವಿಜ್ಞಾನಿಗಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2022, 18:50 IST
Last Updated 30 ಡಿಸೆಂಬರ್ 2022, 18:50 IST
   

ನವದೆಹಲಿ:ಅಮೆರಿಕ ಮತ್ತು ಸಿಂಗಪುರ ಮೂಲದ ಎರಡು ಬಯೊಮೆಡಿಕಲ್‌ ಕಂಪನಿಗಳು ಕೇಂದ್ರ ಸರ್ಕಾರದ ಪರಿಶೀಲನಾ ಸಮಿತಿಯ ಕಡ್ಡಾಯ ಅನುಮತಿ ಪಡೆಯದೇ 15 ಸಾವಿರಕ್ಕೂ ಹೆಚ್ಚು ಭಾರತೀಯರ ವಂಶವಾಹಿ ವಿಶ್ಲೇಷಣೆಯದತ್ತಾಂಶಗಳ ಅಧ್ಯಯನ (ಜೆನೆಟಿಕ್‌ ಡೆಟಾ ಜಿನೊಮಿಕ್‌ ಸ್ಟಡಿ) ಅನಧಿಕೃತವಾಗಿ ನಡೆಸಿವೆ. ಇದೊಂದು ಬಹುದೊಡ್ಡ ಹಗರಣವೆಂದು ಭಾರತೀಯ ವಿಜ್ಞಾನಿಗಳ ಗುಂಪೊಂದು ಗಂಭೀರ ಆರೋಪ ಮಾಡಿದ್ದು, ಈ ಹಗರಣದ ತನಿಖೆಗೆ ಒತ್ತಾಯಿಸಿದೆ.

ನ್ಯೂಯಾರ್ಕ್ ಮೂಲದ ರೆಜೆನೆರಾನ್ ಮತ್ತು ಸಿಂಗಪುರದಗ್ಲೋಬಲ್ ಜೀನ್ ಕಾರ್ಪೊರೇಷನ್ (ಅನುವಾ) ಕಂಪನಿಗಳು, ಇದುವರೆಗೆ ಸಂಶೋಧನೆ ಮಾಡದೇ ಇದ್ದ ಭಾರತದ ಕೆಲ ಜನ ಸಮುದಾಯಗಳ ವಂಶವಾಹಿ ದತ್ತಾಂಶಗಳ ಆಳ ಅಧ್ಯಯನ ನಡೆಸಿರುವ ಸಂಶೋಧನಾ ವರದಿಯನ್ನುಅಕ್ಟೋಬರ್ ಅಂತ್ಯದಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆದ ವೈಜ್ಞಾನಿಕ ಸಮ್ಮೇಳನದಲ್ಲಿ ಮಂಡಿಸಲಾಗಿದೆ.

ರಾಜಸ್ಥಾನ, ಮಹಾರಾಷ್ಟ್ರ, ಉತ್ತರ ಪ್ರದೇಶ, ಗುಜರಾತ್ ಮತ್ತು ಕರ್ನಾಟಕದ ಜನಸಮುದಾಯಗಳಿಂದ ಸಂಗ್ರಹಿಸಿರುವಭಾರತೀಯರ ಅತಿದೊಡ್ಡ ಆನುವಂಶಿಕ ಅಧ್ಯಯನವೆಂದು ಇದನ್ನು ಸಂಶೋಧಕರು ಹೇಳಿಕೊಂಡಿದ್ದಾರೆ.

ADVERTISEMENT

ಮಾಹಿತಿ ಹಕ್ಕಿನಡಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವಕೇಂದ್ರ ಸರ್ಕಾರ, ಸಂಶೋಧನೆಗಾಗಿ ಭಾರತೀಯರ ವಂಶವಾಹಿ ದತ್ತಾಂಶ ಸಂಗ್ರಹಿಸಲು ಎರಡು ಕಂಪನಿಗಳಿಗೆ ಅನುಮತಿ ನೀಡಿರುವುದನ್ನು ಸ್ಪಷ್ಟವಾಗಿ ನಿರಾಕರಿಸಿದೆ.

ಭಾರತೀಯ ಮಾನವ ಜೈವಿಕ ವಸ್ತುಗಳನ್ನು ಒಳಗೊಂಡ ಪ್ರತಿ ವಿದೇಶಿ ಯೋಜನೆಗೆಭಾರತೀಯ ಸಂಶೋಧನಾ ಸಂಸ್ಥೆಗಳ ಪಾಲ್ಗೊಳ್ಳುವಿಕೆ ಇರಬೇಕು. ಅಲ್ಲದೆ, ನಿಯಂತ್ರಕ ಸಮಿತಿಯಾದ ಆರೋಗ್ಯ ಸಚಿವಾಲಯದ ಪರಿಶೀಲನಾ ಸಮಿತಿಯ (ಎಚ್‌ಎಂಎಸ್‌ಸಿ) ಅನುಮತಿ ಪಡೆಯುವುದು ಕಡ್ಡಾಯ. ಈ ಸಮಿತಿಯು ಜೀನೋಮಿಕ್ಸ್ ದತ್ತಾಂಶ ಸೇರಿ ಭಾರತೀಯ ಜೈವಿಕ ಮಾದರಿಗಳ ದುರುಪಯೋಗ ತಡೆಯುತ್ತದೆ.

‘ರೆಜೆನೆರಾನ್ ಜೆನೆಟಿಕ್ಸ್ ಅಥವಾ ಗ್ಲೋಬಲ್ ಜೀನ್ ಕಾರ್ಪ್ ಪ್ರೈವೆಟ್‌ ಲಿಮಿಟೆಡ್‌ನಿಂದ ಯಾವುದೇ ಪ್ರಸ್ತಾವ ಎಚ್‌ಎಂಎಸ್‌ಸಿಗೆ ಬಂದಿಲ್ಲ.ಎಚ್‌ಎಂಎಸ್‌ಸಿ ಅಥವಾ ಐಸಿಎಂಆರ್‌ಗೆ ಈ ಅಧ್ಯಯನದ ಬಗ್ಗೆ ಯಾವುದೇ ಮಾಹಿತಿಯೂ ಇಲ್ಲ’ ಎಂದುಎಚ್‌ಎಂಎಸ್‌ಸಿಯ ತಾಂತ್ರಿಕ ಭಾಗವಾದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಆರ್‌ಟಿಐ ಅಡಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದೆ.

‘ಅವರು ಮಾದರಿಗಳನ್ನು ಹೇಗೆ ಸಂಗ್ರಹಿಸಿದರು, ಯಾರಿಂದ ಅನುಮತಿ ಪಡೆದರು ಎಂಬುದು ತಿಳಿದಿಲ್ಲ. ಅಂತಹ ಸಂಶೋಧನೆಗಳ ವಾಣಿಜ್ಯ ಉದ್ದೇಶದ ಮಾನವ ಮಾದರಿಗಳನ್ನು ಒಳಗೊಂಡ ಎಲ್ಲ ಭಾರತೀಯ ಆನುವಂಶಿಕ ಸಂಶೋಧನೆಗೆ ಮೇಲ್ವಿಚಾರಣೆಯ ಅಗತ್ಯವಿದೆ’ ಎಂದುದೆಹಲಿಯ ಜೀನೋಮಿಕ್ಸ್ ಮತ್ತು ಇಂಟಿಗ್ರೇಟಿವ್ ಬಯಾಲಜಿಯ ಹಿರಿಯ ವಿಜ್ಞಾನಿ ವಿನೋದ್‌ ಸ್ಕೇರಿಯಾ ‘ಪ್ರಜಾವಾಣಿ’ಗೆ ತಿಳಿಸಿದರು.

ಹೃದಯ ಸಂಬಂಧಿ ಮತ್ತು ವರ್ಟಿಗೊದಂತಹ ಕಾಯಿಲೆಗಳಿಗೆ ನಿಖರ ಕಾರಣಗಳನ್ನು ತಿಳಿಯಲು ಈ ಅಧ್ಯಯನ ನೆರವಾಗಲಿದೆ ಎಂದು ಅಧ್ಯಯನ ತಂಡದಲ್ಲಿದ್ದ ವೀರ ಎಂ.ರಾಜಗೋಪಾಲ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.