ನವದೆಹಲಿ: ದೇಶದ ಉತ್ತರ ಭಾಗದಲ್ಲಿ ಶೀತ ಮಾರುತಗಳು ಬೀಸುತ್ತಿರುವುದಕ್ಕೆ ಸೈಬೀರಿಯಾದಿಂದ ಬೀಸುವ ಶೀತ ಮತ್ತು ಶುಷ್ಕ ಹವೆ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಈ ಕುರಿತು ಮೊಹಾಲಿಯ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಐಐಎಸ್‌ಇಆರ್) ಸಂಶೋಧಕರು ಕೈಗೊಂಡಿದ್ದ ಅಧ್ಯಯನದ ವರದಿಯು ‘ವೆದರ್ ಅಂಡ್ ಕ್ಲೈಮೇಟ್ ಎಕ್ಸ್‌ಟ್ರೀಮ್ಸ್’ ನಿಯತಕಾಲಿಕದಲ್ಲಿ ಪ್ರಕಟವಾಗಿದೆ. ಹವಾಮಾನ ವೈಪರೀತ್ಯ ಹಾಗೂ ಮುಂದಿನ ದಿನಗಳಲ್ಲಿ ವಾತಾವರಣದಲ್ಲಿ ಕಂಡುಬರುವ ವ್ಯತ್ಯಾಸದ ಬಗ್ಗೆ ಈ ಅಧ್ಯಯನವು ಬೆಳಕು ಚೆಲ್ಲುತ್ತದೆ.
ಯುರೇಷಿಯಾದ ಈಶಾನ್ಯ ಭಾಗದಲ್ಲಿ ನವೆಂಬರ್‌ನಿಂದ ಫೆಬ್ರುವರಿ ನಡುವೆ ಶೀತ ಮತ್ತು ಶುಷ್ಕ ಗಾಳಿಯು ಭಾರಿ ಪ್ರಮಾಣದಲ್ಲಿ ಕಂಡುಬರುತ್ತದೆ. ಇದನ್ನು ‘ಸೈಬೀರಿಯನ್ ಹೈ’ ಎಂದು ಕರೆಯಲಾಗುತ್ತದೆ.
‘ಈ ವಿದ್ಯಮಾನವೇ ಉತ್ತರ ಭಾರತದಲ್ಲಿ ಶೀತ ವಾತಾವರಣಕ್ಕೆ ಕಾರಣ ಹಾಗೂ ಚಳಿಗಾಲದಲ್ಲಿ ತಾಪಮಾನ ವಿಪರೀತವಾಗಿ ಇಳಿಕೆಯಾಗುವುದರ ಕುರಿತು ತಿಳಿದುಕೊಳ್ಳಲು ಅಧ್ಯಯನ ನೆರವಾಗುತ್ತದೆ’ ಎಂದು ಪ್ರೊ.ರಾಜು ಅಟ್ಟದ ನೇತೃತ್ವದ ತಂಡ ನಡೆಸಿದ ಸಂಶೋಧನೆಯು ಹೇಳುತ್ತದೆ.
ಐಐಎಸ್‌ಇಆರ್‌ನ ಕೆ.ಎಸ್.ಅಧೀರ, ಬ್ರೆಜಿಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಸ್ಪೇಸ್ ರಿಸರ್ಚ್‌ನ ವಿ.ಬ್ರಹ್ಮಾನಂದ ರಾವ್ ಅವರು ಸಹ ತಂಡದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.