ನವದೆಹಲಿ: ಹಿಂದೂ ಮಹಾಸಾಗರದಲ್ಲಿ ಕಂಡುಬರುವ ‘ಗುರುತ್ವ ರಂಧ್ರ’ (ಗ್ರ್ಯಾವಿಟಿ ಹೋಲ್) ಸೃಷ್ಟಿಯ ಹಿಂದಿರುವ ಕಾರಣವನ್ನು ಬೆಂಗಳೂರು ಮೂಲದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸಂಶೋಧಕರು ಪತ್ತೆಹಚ್ಚಿದ್ದಾರೆ.
ಶ್ರೀಲಂಕಾದ ದಕ್ಷಿಣಕ್ಕೆ ಈ ‘ಗುರುತ್ವ ರಂಧ್ರ’ ಇದ್ದು, 30 ಲಕ್ಷ ಚದರ ಕಿ.ಮೀ.ಗಿಂತಲೂ ಅಧಿಕ ವಿಸ್ತೀರ್ಣ ಹೊಂದಿದೆ.
‘ಈ ಪ್ರದೇಶದಲ್ಲಿ ಗುರುತ್ವಾಕರ್ಷಣ ಬಲವು ದುರ್ಬಲವಾಗಿರುವುದೇ ಗುರುತ್ವ ರಂಧ್ರ ಸೃಷ್ಟಿಯಾಗಲು ಕಾರಣ’ ಎಂದು ಐಐಎಸ್‌ಸಿಯಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ಅತ್ರೇಯಿ ಘೋಷ್ ಹೇಳಿದ್ದಾರೆ.
‘ಜಿಎಫ್‌ಝಡ್ ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೊಸೈನ್ಸಸ್’ನ ಸಂಶೋಧಕರೊಂದಿಗೆ ಐಐಎಸ್‌ಸಿ ವಿಜ್ಞಾನಿಗಳು ಈ ಭೌಗೋಳಿಕ ವಿದ್ಯಮಾನ ಕುರಿತು ನಡೆಸಿರುವ ಅಧ್ಯಯನದ ವರದಿ ‘ಜಿಯೊಫಿಜಿಕಲ್ ರಿಸರ್ಚ್ ಲೆಟರ್ಸ್’ ಎಂಬ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.
‘ಗುರುತ್ವ ರಂಧ್ರ’ ಇರುವ ಪ್ರದೇಶದಲ್ಲಿ ಸಮುದ್ರ ಮಟ್ಟವು ಜಾಗತಿಕ ಸರಾಸರಿ ಮಟ್ಟಕ್ಕಿಂತ 100 ಮೀಟರ್‌ನಷ್ಟು ಕೆಳಗೆ ಇದೆ. ಗುರುತ್ವಾಕರ್ಷಣೆ ಬಲವು ಕಡಿಮೆ ಇರುವ ಕಾರಣ ಈ ಸ್ಥಳದಲ್ಲಿ ಸಮುದ್ರದ ಮೇಲ್ಮೈ 106 ಮೀಟರ್‌ನಷ್ಟು ಆಳಕ್ಕೆ ಕುಸಿದಿದೆ.
‘ಗುರುತ್ವ ರಂಧ್ರ’ದಿಂದಾಗಿ ಸಾಗರ ಮೇಲ್ಮೈನಲ್ಲಿ ಕಂಡುಬರುವ ಈ ಅಸಮಾನತೆಯನ್ನು ‘ಇಂಡಿಯನ್ ಓಷನ್ ಜಿಯಾಯ್ಡ್ ಲೊ’ (ಐಒಜಿಎಲ್) ಎಂದು ಕರೆಯಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.