ನವದೆಹಲಿ: ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ದಟ್ಟ ಮಂಜು ಕವಿದ ಕಾರಣ ವಿಮಾನ ಹಾರಾಟಕ್ಕೆ ಎದುರಾಗಿರುವ ಸಮಸ್ಯೆಯನ್ನು ಪರಿಹರಿಸಲು ವಿಮಾನಯಾನ ಸಚಿವಾಲಯ ಮುಂದಾಗಿದೆ.
ಇದಕ್ಕೆ ಸಂಬಂಧಿಸಿದಂತೆ ದಿನದಲ್ಲಿ ಮೂರು ಬಾರಿ ಮಂಜು ಕವಿದ ವಾತಾವರಣದ ಮಾಹಿತಿ ನೀಡುವಂತೆ ದೆಹಲಿ, ಮುಂಬೈ ಸೇರಿದಂತೆ ದೇಶದ ಇತರ ನಾಲ್ಕು ಮಹಾನಗರಗಳ ವಿಮಾನ ನಿಲ್ದಾಣಗಳಿಗೆ ಸೂಚನೆ ನೀಡಿದೆ.
ಮಂಜು ಕವಿದ ವಾತಾವರಣ ಕುರಿತು ನಿಗಾ ವಹಿಸಲು ಮತ್ತು ಮಾಹಿತಿ ಸಂಗ್ರಹಿಸಿ, ರವಾನಿಸಲು ಹಾಗೂ ಪ್ರಯಾಣಿಕರ ಸಮಸ್ಯೆಗೆ ಪರಿಹಾರ ನೀಡಲು ವಾರ್ ರೂಂ ತೆರೆಯುವಂತೆಯೂ ಸಚಿವಾಲಯ ಸೂಚಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ‘ವಿಮಾನ ನಿಲ್ದಾಣಗಳಲ್ಲಿ ದಿನದ 24 ಗಂಟೆಗಳ ಕಾಲ ಭದ್ರತೆ ಒದಗಿಸಲು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF)ಯಲ್ಲಿ ಸಾಕಷ್ಟು ಸಿಬ್ಬಂದಿ ಇದ್ದಾರೆ’ ಎಂದಿದ್ದಾರೆ.
ವಿಮಾನ ಹಾರಾಟದಲ್ಲಿ ವಿಳಂಬದಿಂದಾಗಿ ದೆಹಲಿ ನಿಲ್ದಾಣದಲ್ಲಿ ಇಂಡಿಗೊ ವಿಮಾನದ ಸಹ ಪೈಲಟ್ ಮೇಲೆ ಪ್ರಯಾಣಿಕರೊಬ್ಬರು ಹಲ್ಲೆ ನಡೆಸಿದ್ದು ಹಾಗೂ ಮುಂಬೈ ವಿಮಾನ ನಿಲ್ದಾಣದಲ್ಲಿ ನೆಲದ ಮೇಲೆ ಪ್ರಯಾಣಿಕರು ಕುಳಿತು ಊಟ ಮಾಡಿದ್ದು ವರದಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.