ADVERTISEMENT

ಶಶಿ ತರೂರ್‌ಗೆ ಸಮನ್ಸ್‌ ಜಾರಿ

‘ಮೋದಿ ಶಿವಲಿಂಗದ ಮೇಲಿನ ಚೇಳು’ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ಮೇ 2019, 17:51 IST
Last Updated 9 ಮೇ 2019, 17:51 IST
ಶಶಿ ತರೂರ್‌
ಶಶಿ ತರೂರ್‌   

ನವದೆಹಲಿ (ಪಿಟಿಐ): ‘ಮೋದಿ ಶಿವಲಿಂಗದ ಮೇಲೆ ಕುಳಿತ ಚೇಳು ಇದ್ದಂತೆ’ ಎಂದು ಆರ್‌ಎಸ್‌ಎಸ್‌ ನಾಯಕರೊಬ್ಬರು ಪತ್ರಕರ್ತರಿಗೆ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಭಾಷಣ ಮಾಡಿದ ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ಗೆ ದೆಹಲಿ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ.

ಹೆಸರು ಉಲ್ಲೇಖಿಸದ ಆರ್‌ಎಸ್‌ಎಸ್‌ ನಾಯಕರ ಹೇಳಿಕೆಯ ಬಗ್ಗೆ ತಮ್ಮ ಭಾಷಣದಲ್ಲಿ ಶಶಿ ಮಾತನಾಡಿದ್ದಾರೆ. ಇದರಿಂದ ನನ್ನ ಧಾರ್ಮಿಕ ಭಾವನೆಗಳಿಗೆ ತೀವ್ರ ಘಾಸಿಯಾಗಿದೆ ಎಂದು ದೆಹಲಿಯ ಬಿಜೆಪಿ ನಾಯಕ ರಾಜೀವ್‌ ಬಬ್ಬರ್‌ ಅವರು ತರೂರ್‌ ವಿರುದ್ಧ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ತರೂರ್‌ ಅವರು ಕಳೆದ ಅಕ್ಟೋಬರ್‌ 28ರಂದು ಬೆಂಗಳೂರಿನಲ್ಲಿ ನಡೆದ ಸಾಹಿತ್ಯ ಉತ್ಸವದಲ್ಲಿ ಈ ಭಾಷಣ ಮಾಡಿದ್ದರು. ‘ಶಿವಲಿಂಗದ ಮೇಲಿನ ಚೇಳು’ ಹೋಲಿಕೆ ಅಸಾಧಾರಣವಾದ ರೂಪಕ ಎಂದೂ ತರೂರ್‌ ಬಣ್ಣಿಸಿದ್ದರು. ಅದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ತಕ್ಷಣವೇ ಪ್ರತಿಕ್ರಿಯಿಸಿದ ತರೂರ್‌, ‘ಅದು ನನ್ನ ಹೇಳಿಕೆ ಅಲ್ಲ. ಈ ದಾಖಲೆ 6 ವರ್ಷಗಳಿಂದ ಸಾರ್ವಜನಿಕವಾಗಿ ಲಭ್ಯವಿದೆ. ಅದನ್ನಷ್ಟೇ ಉಲ್ಲೇಖಿಸಿದ್ದೇನೆ’ ಎಂದಿದ್ದರು.

ADVERTISEMENT

‘ತರೂರ್‌ ಮಾತಿನಿಂದ ವಿಶ್ವದಾದ್ಯಂತ ಕೋಟ್ಯಂತರ ಶಿವ ಭಕ್ತರ ಮನಸ್ಸಿಗೆ ನೋವಾಗಿದೆ. ಇದು ಸಹಿಸಲಸಾಧ್ಯವಾದ ನಿಂದನೆ. ತರೂರ್‌ ಉದ್ದೇಶಪೂರ್ವಕವಾಗಿಯೇ ಈ ಮಾತು ಹೇಳಿದ್ದಾರೆ. ಧಾರ್ಮಿಕ ನಂಬಿಕೆಗಳನ್ನು ಅವಮಾನಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.